ದೇವನಹಳ್ಳಿ: ಸಾಗುವಳಿ ಜಮೀನು ಮಧ್ಯದಲ್ಲಿಯೇ ಗುಡ್ಡ ಇದ್ದು. ಗುಡ್ಡದ ಮೇಲೆ ಗ್ರಾಮ ದೇವತೆ ಕರಗದಮ್ಮ ನೆಲೆ ಇದೆ. ಪಕ್ಕದಲ್ಲಿಯೇ ಹತ್ತು ಗ್ರಾಮಗಳಿಗೆ ಬೇಕಾದ ಕೆರೆ ಇದೆ, ಗ್ರಾಮಸ್ಥರೊಂದಿಗೆ ಅವಿನಾಭವ ಸಂಬಂಧ ಇದೆ, ಇದೇ ಗುಡ್ಡವನ್ನು ಕಲ್ಲುಗಣಿಗಾರಿಕೆಗೆ ಗುತ್ತಿಗೆ ನೀಡಲಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಸಾಗುವಳಿ ಜಮೀನು ಪಕ್ಕದಲ್ಲಿಯೇ ಕಲ್ಲು ಗಣಿಗಾರಿಕೆ ಆರಂಭ ದೇವನಹಳ್ಳಿ ತಾಲೂಕಿನ ಮುದುಗುರ್ಕಿ ಗ್ರಾಮದ ಸರ್ವೆ ನಂಬರ್ 31 ರಲ್ಲಿರುವ ಗುಡ್ಡ ಇದ್ದು, ಗುಡ್ಡದಲ್ಲಿನ 2 ಎಕರೆ ಜಾಗವನ್ನು ಮುನಿರಾಜು ಎಂಬುವರಿಗೆ 20 ವರ್ಷ ಕಾಲ ಕಲ್ಲು ಗಣಿಗಾರಿಕೆ ನಡೆಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ನೀಡಿದೆ, ಈಗಾಗಲೇ ಕಲ್ಲು ಗಣಿಗಾರಿಕೆ ಸಿದ್ಧತೆ ಪ್ರಾರಂಭವಾಗಿದೆ ಇದು ಮುದುಗುರ್ಕಿ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಗುಡ್ಡದ ಸುತ್ತಮುತ್ತಲು ಸಾಗುವಳಿ ಜಮೀನು ಇದ್ದು, ದ್ರಾಕ್ಷಿ, ರಾಗಿ, ಟೊಮೇಟೊ, ಜೋಳ ಬೆಳೆಯುತ್ತಿದ್ದರು. ಆದರೀಗ ಕಲ್ಲು ಗಣಿಗಾರಿಕೆ ಪ್ರಾರಂಭವಾದರೆ ವ್ಯವಸಾಯ ಮಾಡಲು ಸಾಧ್ಯವಾಗುವುದಿಲ್ಲ ಎಂಬುದು ಗ್ರಾಮಸ್ಥರ ನೋವು. ಗಣಿಗಾರಿಕೆಯಿಂದ ಧೂಳು ಗ್ರಾಮದ ಪರಿಸರ ಹಾಳು ಮಾಡುವುದಲ್ಲದೇ ಬೆಳೆಗಳ ಮೇಲೆ ಪರಿಣಾಮ ಬೀರುತ್ತೆ, ಗಣಿಗಾರಿಕೆಯ ಸ್ಟೋಟದಿಂದ ಮನೆಗಳು ಗೋಡೆ ಬಿರುಕು ಬಿಳಲಿದೆ, ಸ್ಫೋಟದಿಂದ ಕಲ್ಲುಗಳು ಬಿಳುವುದರಿಂದ ಬೆಳೆ ನಾಶವಾಗಲಿದೆ.
ಗುಡ್ಡದ ಮೇಲೆ ಗ್ರಾಮಸ್ಥರು ಹಿಂದಿನಿಂದ ಪೂಜಿಸುವ ಗ್ರಾಮ ದೇವತೆ ಕರಗದಮ್ಮ ನೆಲೆ ಇದೆ, ಹಬ್ಬ ಹರಿ ದಿನಗಳಲ್ಲಿ ಕರಗದಮ್ಮ ದೇವಿಗೆ ವಿಶೇಷ ಪೂಜೆ ಸಹ ನೆರವೇರುತ್ತದೆ. ಕಲ್ಲು ಗಣಿಗಾರಿಕೆಯಿಂದ ಕರಗದಮ್ಮ ದೇವಿ ನೆಲೆ ನಾಶವಾಗುವ ಸಾಧ್ಯತೆ ಇದೆ. ಮತ್ತು ಗುಡ್ಡದ ಬಳಿ ಇರುವ ಕೆರೆ ಹತ್ತಾರು ಗ್ರಾಮಗಳ ಜೀವಸೆಲೆಯಾಗಿದೆ, ಜಾನುವಾರುಗಳಿಗೆ ನೀರು ಮೇವಿನ ತಾಣವಾಗಿದೆ, ಕಲ್ಲು ಗಣಿಗಾರಿಕೆಯಿಂದ ಕೆರೆ ಸಹ ಕಲುಷಿತವಾಗಲಿದೆ.
ಇನ್ನೂ ಕಲ್ಲುಗಣಿಕಾರಿಕೆಯ ಸ್ಥಳದಿಂದ ಕೇವಲ 2 ಕಿ.ಮೀ ಅಂತರದಲ್ಲಿ ನಾಗಾರಾರ್ಜುನ ಕಾಲೇಜ್ ಇದ್ದು, ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 4 ಕಿ.ಮೀ ಅಂತರದಲ್ಲಿ ನಂದಿಗಿರಿಧಾಮ ಸಹ ಇದೆ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಹ ಸನಿಹವೇ ಇದೆ ಇಂತಹ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿರುವುದು ಕಾನೂನುಬಾಹಿರ ಅನ್ನುವುದು ಗ್ರಾಮಸ್ಥರ ವಾದವಾಗಿದೆ, ಯಾವುದೇ ಕಾರಣಕ್ಕೂ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಓದಿ : ಹಿಂದೂ ಸ್ಮಶಾನ ಸ್ವಚ್ಛಗೊಳಿಸುವ ಮುಸ್ಲಿಂ ಮಹಿಳೆ: ಏಕತೆ ಬಲಪಡಿಸಲು ನಾರಿಯ ಪ್ರಯತ್ನ!
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರಾದ ರಶ್ಮಿಯವರು ಕೋರ್ಟ್ ಆದೇಶದ ಮೇರೆಗೆ ಕಲ್ಲು ಗಣಿಗಾರಿಕೆಗೆ ಗುತ್ತಿಗೆ ನೀಡಲಾಗಿದೆ, ಕಲ್ಲು ಗಣಿಗಾರಿಕೆಗೆ ಗ್ರಾಮಸ್ಥರ ವಿರೋಧ ವ್ಯಕ್ತವಾದ ಹಿನ್ನಲೆ ಡಿಸ್ಟ್ರಿಕ್ಟ್ ಟಾಸ್ಕ್ ಪೋರ್ಸ್ ಕಮಿಟಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಲಿದೆ ಎಂದರು. ಕೃಷಿಯಿಂದ ನೆಮ್ಮದಿಯ ಜೀವನ ಮಾಡುತ್ತಿದ್ದ ಗ್ರಾಮಸ್ಥರಿಗೆ ಕಲ್ಲು ಗಣಿಗಾರಿಕೆಯ ಭೂತ ಇನ್ನಿಲ್ಲದಂತೆ ಕಾಡುತ್ತಿದ್ದು ಗ್ರಾಮಸ್ಥರ ನೋವಿಗೆ ಅಧಿಕಾರಿಗಳು ಸ್ಪಂದಿಸುವ ಕೆಲಸ ಮಾಡ ಬೇಕಿದೆ.