ದೊಡ್ಡಬಳ್ಳಾಪುರ: ಎಸ್ಎಸ್ಎಲ್ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಫೆಬ್ರವರಿ 25 ತನಕ ಆಕ್ಷೇಪಣೆ ಸಲ್ಲಿಸುವಂತೆ ಹೇಳಲಾಗಿದ್ದು, ಯಾವುದೇ ಮಹತ್ವದ ಅಪೇಕ್ಷಣೆ ಇಲ್ಲಿಯವರೆಗೂ ಬಂದಿಲ್ಲದೇ ಇರುವುದರಿಂದ ಫೆಬ್ರವರಿ 25ರ ನಂತರ ಪರೀಕ್ಷಾ ವೇಳಾ ಪಟ್ಟಿ ಪಕ್ರಟಿಸುವುದಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿದ ಸಚಿವರು, ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹಿಸಿದರು. ನಂತರ ಮಾಧ್ಯಮದೊಂದಿಗೆ ಮಾತನಾಡಿ, ತಾಂತ್ರಿಕ ಸಮಿತಿಯ ಸಲಹೆಯಂತೆ ರಾಜ್ಯದಲ್ಲಿ ಜನವರಿ 1 ರಿಂದ ಎಸ್ ಎಸ್ ಎಲ್ ಸಿ ತರಗತಿ ಪ್ರಾರಂಭವಾಗಿದೆ. ನಮಗೆ ಮಕ್ಕಳ ಆರೋಗ್ಯ ಮುಖ್ಯ. ಅದರ ಜೊತೆಗೆ ಅವರ ಶೈಕ್ಷಣಿಕ ಭವಿಷ್ಯ ಕೂಡ ಬಹಳ ಮುಖ್ಯಲಾಗಿದೆ. ಶಾಲೆಯ ಮಕ್ಕಳು ಹೆಚ್ಚು ಕಾಲ ಶಾಲೆಯಿಂದ ವಿಮುಖರಾದರೆ ಕಲಿಕೆಯಿಂದ ಹಿಂದುಳಿಯುತ್ತಾರೆ. ಕೂಲಿ ಕಾರ್ಮಿಕರಾಗಿ ಕೆಲಸಕ್ಕೆ ಹೋಗುತ್ತಾರೆ ಎಂಬ ಕಾರಣಕ್ಕೆ ಫ್ರೌಢಶಾಲೆಗಳನ್ನ ಪ್ರಾರಂಭ ಮಾಡಲಾಗಿದೆ ಎಂದು ಹೇಳಿದರು.
ತರಗತಿ ಹಾಜರಿ ಕಡ್ಡಾಯ ಮಾಡಿಲ್ಲ ಮತ್ತು ಪೋಷಕರ ಒಪ್ಪಿಗೆ ಮಾತ್ರ ಕಡ್ಡಾಯ ಮಾಡಿದ್ದರೂ ಬಾಶೆಟ್ಟಿಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯ 8 ತರಗತಿಯ 79 ಮಕ್ಕಳಲ್ಲಿ 69 ಮಕ್ಕಳು ಶಾಲೆಗೆ ಬಂದಿರುವುದು ಭರವಸೆ ಹೆಚ್ಚು ಮಾಡಿದೆ. ನಾನು ಶಾಲೆಗೆ ಭೇಟಿ ನೀಡಿದ್ದಾಗ ಶಾಲೆ ಪ್ರಾರಂಭವಾಗ ಬೇಕು ಎನ್ನುವುದು ವಿದ್ಯಾರ್ಥಿಗಳ ಆಸೆಯಾಗಿತ್ತು. ಆನ್ಲೈನ್ ತರಗತಿಯಲ್ಲಿ ಮಕ್ಕಳು ಪ್ರಶ್ನೆ ಕೇಳಲು ಆಗುವುದಿಲ್ಲ ಇದಕ್ಕೆಲ್ಲ ಮತ್ತಷ್ಟು ಸಮಯ ಬೇಕಿದೆ ಎಂದರು.