ನೆಲಮಂಗಲ: ಡಾ. ಶಿವಕುಮಾರ್ ಸ್ವಾಮೀಜಿ ಜ. 21 ರಂದು ಲಿಂಗೈಕ್ಯರಾಗಿ ಎರಡು ವರ್ಷ ಪೂರೈಸಲಿದೆ. ಸ್ವಾಮೀಜಿಯವರ ಪುಣ್ಯಸ್ಮರಣೆಯ ದಿನವನ್ನು ದಾಸೋಹ ದಿನವನ್ನಾಗಿ ಘೋಷಣೆ ಮಾಡುವಂತೆ ನೆಲಮಂಗಲ ತಾಲೂಕು ಶಿವಗಂಗೆ ಕ್ಷೇತ್ರದ ಶ್ರೀ ಹೊನ್ನಮ್ಮಗವಿ ಮಠದ ರುದ್ರಮುನಿ ಶಿವಾಚಾರ್ಯರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ನಡೆದಾಡುವ ದೇವರು ಎಂದೇ ಪ್ರಸಿದ್ಧರಾಗಿದ್ದ ಡಾ.ಶಿವಕುಮಾರ್ ಸ್ವಾಮೀಜಿ ಲಿಂಗೈಕೈರಾಗಿ ಜ. 21ಕ್ಕೆ ಎರಡು ವರ್ಷವಾಗಲಿದೆ. ಶತಾಯುಷಿ ಡಾ.ಶಿವಕುಮಾರ್ ಸ್ವಾಮೀಜಿ 82 ವರ್ಷ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾಗಿ ಶೈಕ್ಷಣಿಕ ಕ್ರಾಂತಿ ಮಾಡಿದ್ದರು. ಮಠದಲ್ಲಿ ದಾಸೋಹದ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಜೀವನ ಕೊಟ್ಟವರು. ಒಂದೇ ಸೂರಿನಡಿ ಏಕಕಾಲಕ್ಕೆ 10 ಸಾವಿರ ವಿದ್ಯಾರ್ಥಿಗಳಿಗೆ ತ್ರಿವಿಧ ದಾಸೋಹ ನೀಡುತ್ತಿದ್ದರು.