ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾಗಿರುವ 108 ಅಡಿ ಎತ್ತರದ ಕಂಚಿನ ಕೆಂಪೇಗೌಡರ ಪ್ರತಿಮೆ ನವೆಂಬರ್ 11ರಂದು ಲೋಕಾರ್ಪಣೆಯಾಗಲಿದೆ.
ಪ್ರತಿಮೆಯ ಉದ್ಘಾಟನೆಯ ಭಾಗವಾಗಿ ಕಳೆದ 15 ದಿನಗಳ ಕಾಲ ರಾಜ್ಯಾದ್ಯಂತ ವಿವಿಧ ಸ್ಥಳಗಳಲ್ಲಿ ಪವಿತ್ರ ಮೃತ್ತಿಕಾ ಸಂಗ್ರಹಣೆ ಅಭಿಯಾನವು ಇಂದು ಸಂಪನ್ನಗೊಂಡಿತು. ಇದರ ಅಂಗವಾಗಿ ವಿಮಾನ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಡಿನ 22 ಸಾವಿರಕ್ಕೂ ಹೆಚ್ಚು ಸ್ಥಳಗಳಿಂದ ಸಂಗ್ರಹಿಸಿ ತರಲಾಗಿದ್ದ ಪವಿತ್ರ ಮೃತ್ತಿಕೆಯನ್ನು ಸ್ವೀಕರಿಸಿ, ಪ್ರತಿಮೆಯ ನಾಲ್ಕು ಗೋಪುರಗಳ ಪೈಕಿ ಒಂದಕ್ಕೆ ಸಾಂಕೇತಿಕವಾಗಿ ಸಮರ್ಪಿಸಲಾಯಿತು.
11 ಗಂಟೆಗೆ ಸರಿಯಾಗಿ ಸುಮುಹೂರ್ತದಲ್ಲಿ ಋತ್ವಿಜರ ವೇದಮಂತ್ರ ಘೋಷದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ರಾಜ್ಯದ 31 ಜಿಲ್ಲೆಗಳಿಂದಲೂ ಪವಿತ್ರ ಮೃತ್ತಿಕೆಯೊಂದಿಗೆ ಆಗಮಿಸಿದ್ದ ವಿಶೇಷ ರಥಗಳನ್ನು ವಿಧಿಬದ್ಧವಾಗಿ ಬರಮಾಡಿಕೊಳ್ಳಲಾಯಿತು. ನಂತರ, ಪವಿತ್ರ ಮೃತ್ತಿಕೆಗೆ ಪೂಜೆ ಸಲ್ಲಿಸಿ, ಮುಂದಿನ ವಿಧಿಗಳನ್ನು ಮಂತ್ರಸಹಿತವಾಗಿ ನೆರವೇರಿಸಲಾಯಿತು. ಸಚಿವರು ಮತ್ತು ಸಂಸದರು ಈ ಕೈಂಕರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನ: ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಅಶ್ವತ್ಥ್ ನಾರಾಯಣ್ ಅವರು, ಕೆಂಪೇಗೌಡರ ಹೆಸರು ಇಡೀ ಕರ್ನಾಟಕದಲ್ಲಿ ಅಖಂಡತೆಯ ಭಾವನೆಯನ್ನು ಮೂಡಿಸಬೇಕೆಂಬ ಉದ್ದೇಶದಿಂದ 15 ದಿನಗಳ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ಸಿದ್ಧಪಡಿಸಿದ್ದ 21 ವಿಶೇಷ ರಥಗಳು ನಾಡಿನ 22 ಸಾವಿರ ಸ್ಥಳಗಳಿಗೆ ಹೋಗಿಬಂದಿವೆ ಎಂದರು.