ಹೊಸಕೋಟೆ: ಹದಿನೆಂಟು ವರ್ಷ ತುಂಬಿದ ದ್ವಿತೀಯ ಪಿಯುಸಿ ಮತ್ತು ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇಂದು ಹೊಸಕೋಟೆಯಲ್ಲಿ ಶಾಸಕ ಶರತ್ ಬಚ್ಚೇಗೌಡರು ಕಾಂಗ್ರೆಸ್ನಿಂದ ಉಚಿತ ಲಸಿಕೆ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಕಾರ್ಯಕ್ರಮವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಉದ್ಘಾಟನೆ ಮಾಡಿದರು. ಈ ವೇಳೆ, ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಂಡರು.
ಇದಕ್ಕೂ ಮುನ್ನ ಉದ್ಘಾಟನೆಗೆ ಬರುತಿದ್ದಂತೆ ಸಾಕಷ್ಟು ಮಂದಿ ಅಭಿಮಾನಿಗಳು ಸ್ವಾಗತಿಸಲು ಮುಗಿಬಿದ್ದರು. ಆದರೆ, ಸಾಮಾಜಿಕ ಅಂತರ ಮಾಯವಾಗಿದ್ದು ಕಂಡ ಸಿದ್ದರಾಮಯ್ಯ ಅಂತರ ಕಾಪಾಡಿಕೊಳ್ಳಲು ಹೇಳಿ ಅಂತಾ ಶಾಸಕ ಶರತ್ ಬಚ್ಚೇಗೌಡರಿಗೆ ಸೂಚಿಸಿದರು. ನಂತರ ಕಾರಿನಿಂದ ಇಳಿದು ಉಚಿತ ವ್ಯಾಕ್ಸಿನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಲಸಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರದ ವಿರುದ್ದ ಕಿಡಿಕಾರಿದರು. ದಿನ ಬೆಳಗಾದ್ರೆ ಕುರ್ಚಿಗಾಗಿ ಜಗಳ ಮಾಡ್ತಿದ್ದಾರೆ. ಯಡಿಯೂರಪ್ಪಗೆ ಕಣ್ಣು ಕಾಣಲ್ಲ, ಕಿವಿ ಕೇಳಲ್ಲ, ವಯಸ್ಸಾಯ್ತು. ಒಂದು ಟೆಂಡರ್ ಕೊಡಬೇಕಾದರೆ 10 ಪರ್ಸೆಂಟ್ ಕಮೀಷನ್ ಕೇಳ್ತಾರೆ. ಐಪಿಎಸ್, ಐಎಎಸ್ ಮತ್ತು ಅಧಿಕಾರಿಗಳ ಟ್ರಾನ್ಸಫರ್ಗೆ ದುಡ್ಡು ಕೇಳ್ತಾರೆ. ಎಲ್ಲವನ್ನು ಮಗನಿಗೆ ಬಿಟ್ಟು ಬಿಟ್ಟಿದ್ದಾರೆ ಯಡಿಯೂರಪ್ಪ. ಅವರು ವರ್ಸ್ಟ್ ಚೀಫ್ ಮಿನಿಸ್ಟರ್ ಎಂದು ಗುಡುಗಿದರು.