ಬೆಂಗಳೂರು: ಕೋವಿಡ್-19 ಉಪಕರಣ ಖರೀದಿಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎಂದು ಆರೋಪ ಮಾಡಿದ್ದ ಕಾಂಗ್ರೆಸ್ಗೆ ಸುದ್ದಿಗೋಷ್ಠಿ ನಡೆಸುವ ಮೂಲಕ ಆಡಳಿತ ಪಕ್ಷದ ಸಚಿವರು ತಿರುಗೇಟು ನೀಡಿದ್ದರು. ಆದರೆ ಇದೀಗ ಸಿದ್ದರಾಮಯ್ಯ ಟ್ವೀಟರ್ನಲ್ಲಿ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
ಕೊರೊನಾ ಉಪಕರಣ ಖರೀದಿಯಲ್ಲಿ ಯಾವುದೇ ರೀತಿಯ ಅವ್ಯವಹಾರವಾಗಿಲ್ಲ ಎಂದು ಬಿಜೆಪಿ ಸ್ಪಷ್ಟೀಕರಣ ನೀಡಿದ್ದು, ಇದೇ ವಿಷಯವನ್ನಿಟ್ಟುಕೊಂಡು ಸಿದ್ದರಾಮಯ್ಯ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಕೊರೊನಾ ಉಪಕರಣಗಳ ಖರೀದಿಯಲ್ಲಿ ಅಕ್ರಮ ನಡೆದಿಲ್ಲ ಎನ್ನುವ ವಿಶ್ವಾಸ ನಿಮಗಿದ್ದರೆ ಅಂಜಿಕೆ ಯಾಕೆ? ಆರೋಪಗಳ ತನಿಖೆಯನ್ನು ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ಮಾಡಿಸಿ. ನಮ್ಮ ದಾಖಲೆಗಳನ್ನು ಅಲ್ಲಿಯೇ ನೀಡುತ್ತೇವೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಉಪ ಮುಖ್ಯಮಂತ್ರಿ ಡಾ ಅಶ್ವತ್ಥ್ ನಾರಾಯಣ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವರಾದ ಡಾ.ಕೆ. ಸುಧಾಕರ್, ಆರೋಗ್ಯ ಸಚಿವ ಬಿ. ಶ್ರೀರಾಮುಲು ಹಾಗೂ ಆರ್.ಅಶೋಕ್ ಅವರಿಗೆ ಸವಾಲು ಹಾಕಿದ್ದಾರೆ.
2019ರ ವೆಂಟಿಲೇಟರ್ ಖರೀದಿಯಲ್ಲಿಯೂ ಅಕ್ರಮವಾಗಿದೆ. ಅದೇನು ಚಂದ್ರಲೋಕದಿಂದ ಬಂದಿತ್ತಾ? ಎಂದು ಕೇಳಿದ್ದಿರಲ್ಲಾ ಸಚಿವ ಆರ್. ಅಶೋಕ್ ಅವರೇ, ಆಗ ಅಕ್ರಮವಾಗಿದ್ದರೆ ವಿರೋಧ ಪಕ್ಷದಲ್ಲಿದ್ದ ನೀವ್ಯಾಕೆ ಆಗಲೇ ಪ್ರಶ್ನಿಸಿರಲಿಲ್ಲ. ಆ ಕಾಲದಲ್ಲಿ ನೀವು ಮಂಗಳ ಗ್ರಹದಲ್ಲಿ ಇದ್ರಾ? ಎಂದು ಪ್ರಶ್ನೆ ಮಾಡಿದ್ದಾರೆ.