ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಸಿದ್ದರಾಮಯ್ಯ ಅವರಿಗೆ ಇವತ್ತು ಇರೋದು ಕೇವಲ ಸಿಎಂ ಕುರ್ಚಿ ಚಿಂತೆಯಷ್ಟೇ. ಅವರನ್ನು ಮುಖ್ಯಮಂತ್ರಿಯಾಗಲು ನಾವು ಬಿಡಲ್ಲ. ಭಾರತೀಯ ಜನತಾ ಪಾರ್ಟಿ ಗಟ್ಟಿಯಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಾರಿಗೆ ಸಚಿವ ಬಿ ಶ್ರೀರಾಮುಲು ವಾಗ್ದಾಳಿ ನಡೆಸಿದರು.
ದೊಡ್ಡಬಳ್ಳಾಪುರ ನಗರದ ಮುತ್ತೂರಿನಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಅವರಿಗೆ ಪ್ರಾಣಿ ಪಕ್ಷಿಗಳ ದಾಸೋಹ ಸೇವಾ ಸಮಿತಿಯಿಂದ ಸನ್ಮಾನ ಮಾಡಲಾಯಿತು. ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರಾಣಿ ಪಕ್ಷಿಗಳ ದಾಸೋಹ ಸೇವಾ ಸಮಿತಿಗೆ ನಾನು ಅಭಿನಂದನೆ ಸಲ್ಲಿಸುವೆ. ಇವತ್ತು ಮನುಷ್ಯರಿಗೆ ಊಟ ಹಾಕುವುದೇ ಕಷ್ಟ. ಆದರೆ, ಮುನಿರಾಜು ಅವರು ಪ್ರಾಣಿ -ಪಕ್ಷಿಗಳಿಗೆ ದಾಸೋಹ ಮಾಡುತ್ತಿದ್ದಾರೆ. ಅವರ ಸೇವೆಗೆ ನಾನು ಮೆಚ್ಚುಗೆ ವ್ಯಕ್ತಪಡಿಸುವೆ ಎಂದರು.
ಕಳಂಕ ತರುವಂತಹ ಹೇಳಿಕೆ: ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವ ಶ್ರೀರಾಮುಲು, ಅದೆಲ್ಲಾ ಪೊಲಿಟಿಕಲ್ ಪ್ರವೋಕ್, ಪ್ರಚೋದನಕಾರಿ ಹೇಳಿಕೆ ನೀಡುವಂತ ಕೆಲಸ ಮಾಡುತ್ತಿದ್ದಾರೆ. ಅವತ್ತಿನ ಕಾಂಗ್ರೆಸ್ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದು ನಾವು ಹೇಳಿದ್ವಿ. ಸಿದ್ದರಾಮಯ್ಯನವರನ್ನ ಓಲೈಕೆ ಮಾಡುವ ಕಾರಣಕ್ಕೆ ಕೆಂಪಣ್ಣ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ. ಇದು ಯಾರಿಗೂ ಶೋಭೆ ತರುವ ಕೆಲಸವಲ್ಲ. ಯಾವುದೇ ದಾಖಲೆಗಳಿಲ್ಲದೆ ಸರ್ಕಾರಕ್ಕೆ ಕಳಂಕ ತರುವಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.