ಆನೇಕಲ್:ನಿನ್ನೆ ರಾತ್ರಿ ಹೆಬ್ಬಗೋಡಿಯಲ್ಲಿ ಜಾರ್ಖಂಡ್ ಮೂಲದ 14 ಮಂದಿ ವಲಸೆ ಕಾರ್ಮಿಕರು ಬೀದಿಗೆ ಬಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಸಂಸದೆ ಶೋಭಾ ಕರಂದ್ಲಾಜೆ ಖುದ್ದು ತೆರಳಿ ತಕ್ಷಣ ಸ್ಪಂದಿಸಿದ್ದಾರೆ.
ಹೆಬ್ಬಗೋಡಿ ಮೇಲ್ಸೇತುವೆ ಕೆಳಗಡೆ ನಿಂತು ತಮ್ಮ ಜಾರ್ಖಂಡ್ ಸರ್ಕಾರಕ್ಕೆ ಮನವಿ ಮಾಡಿಕೊಂಡ ಕಾರ್ಮಿಕರ ಅಳಲಿಗೆ ಅಲ್ಲಿನ ಮುಖ್ಯಮಂತ್ರಿ ಹೇಮಂತ್ ಸೊರೇನ್ ಕರ್ನಾಟಕ ಸರ್ಕಾರದ ಗಮನ ಸೆಳೆದಿದ್ದರು. ಕೂಡಲೇ ಎಚ್ಚೆತ್ತ ಮುಖ್ಯಮಂತ್ರಿಗಳ ಕಚೇರಿ, ಸಂಸದೆ ಶೋಭಾ ಕರಂದ್ಲಾಜೆ ಮೂಲಕ ವಲಸೆ ಕಾರ್ಮಿಕರ ಮನವಿಗೆ ಸ್ಪಂದಿಸುವಂತೆ ಮಾಡಿದೆ. ಹೆಬ್ಬಗೋಡಿ ಠಾಣೆ ಬಳಿಗೆ ಬಂದ ಸಂಸದೆ, ನಿರಾಶ್ರಿತರನ್ನು ಬಾಡಿಗೆ ಮನೆಯಿಂದ ಮಾಲೀಕ ಹೊರಗಟ್ಟಿ ಹಿಂಸಿಸಿದ್ದ ಬಗ್ಗೆ ಮಾಹಿತಿ ಪಡೆದಿದ್ದಾರೆ.