ದೇವನಹಳ್ಳಿ(ಬೆಂಗಳೂರು.ಗ್ರಾ.) :ಲಂಡನ್ನಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸುವ ವೇಳೆ ಮಗು ಹುಟ್ಟಿದ ಸುದ್ದಿ ಕೇಳಿ ತಂದೆ ರೋಮಾಂಚನಗೊಂಡಿದ್ದಾರೆ. ತಂದೆಯಾದ ಖುಷಿಗೆ ಸಹ ಪ್ರಯಾಣಿಕರಿಗೆ ಸಿಹಿ ಹಂಚಿ ಸಂತಸ ಪಟ್ಟರು. ಚೆನ್ನೈ ಮೂಲದ ಅನು ಬಾಲಾಜಿ ಬ್ರಿಟಿಷ್ ಏರ್ ವೇಸ್ನ ವಿಮಾನ ಸಂಖ್ಯೆ BA119ರಲ್ಲಿ ಲಂಡನ್ನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಪ್ರಯಾಣದ ನಡುವೆಯೇ ಅವರಿಗೆ ತಂದೆಯಾದ ಸಿಹಿ ಸುದ್ದಿ ಬಂದಿದೆ. ತಂದೆಯಾದ ಖುಷಿಗೆ ರೋಮಾಂಚನಗೊಂಡ ಅವರು ವಿಮಾನ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂತಸದ ಕ್ಷಣವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪೋಸ್ಟ್ನಲ್ಲಿ' ಲಂಡನ್ನಿಂದ ಬೆಂಗಳೂರಿಗೆ ನಾನು ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆ. ಈ ವೇಳೆ, ಆಕಾಶದಲ್ಲಿ ತೆಲುತ್ತಿದ್ದ ವೇಳೆ, ನನಗೆ ನನ್ನ ಮೊದಲ ಮಗ ಜನಿಸಿದ ಸಂತಸದ ಸುದ್ದಿ ಸಿಕ್ಕಿತು. ಈ ಸಂತೋಷವನ್ನು ನನ್ನೊಂದಿಗೆ ಸಂಭ್ರಮಿಸಿದ ಸಿಬ್ಬಂದಿ ಎಲೆನಾಗೆ ಧನ್ಯವಾದಗಳು. ಕೊನೆಯ ನಿಮಿಷದಲ್ಲಿ ಟಿಕೆಟ್, ವಿಮಾನದಲ್ಲಿ ವೇಗದ ಭದ್ರತೆ, ಉತ್ತಮ ಸೇವೆ ಮತ್ತು ಇಂಟರ್ನೆಟ್ ಸಿಕ್ಕಿದ್ದಕ್ಕಾಗಿ ಧನ್ಯವಾದಗಳು.. ಬ್ರಿಟಿಷ್ ಏರ್ವೇಸ್ ಸ್ಮರಣೀಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರತಿಯೊಬ್ಬ ವ್ಯಕ್ತಿಗೂ ತಾನು ತಂದೆಯಾಗುವ ಕ್ಷಣ ಅವನ ಜೀವನದಲ್ಲೇ ಅತ್ಯಂತ ಶ್ರೇಷ್ಠವಾಗಿರುತ್ತದೆ. ಪತ್ನಿ ಗರ್ಭಿಣಿ ಎಂಬ ಸುದ್ದಿಯೇ ಅತೀವ ಸಂತಸವಾಗಿದ್ದರೆ ಮಗು ಪ್ರಪಂಚಕ್ಕೆ ಬಂದಾಗ ತಂದೆಯ ಖುಷಿಯನ್ನು ಬಣ್ಣಿಸಲು ಪದಗಳೇ ಸಾಲದು. ತಾಯಿಯಾದವಳು 9 ತಿಂಗಳು ಮಗುವನ್ನು ಹೊತ್ತು ಹೆತ್ತರೆ, ತಂದೆಯಾದವ ಎಲ್ಲಾ ರೀತಿಯ ಕನಸನ್ನು ಅದಾಗಲೇ ಕಂಡಿರುತ್ತಾನೆ. ತನ್ನ ಕಂದನ ಉತ್ತಮ ಭವಿಷ್ಯಕ್ಕಾಗಿ, ಮಗುವಿನ ಸಂತೋಷಕ್ಕಾಗಿ ಎಲ್ಲವನ್ನು ದಾರೆಯೆರೆಯಲು ಸಿದ್ಧನಾಗುತ್ತಾನೆ.
ತನ್ನ ಮಗುವಿನ ಕನಸಿಗೆ ಹೆಗಲಾಗಿ ನಿಂತು ಬೆನ್ನು ತಟ್ಟಿ ಆಧಾರಸ್ತಂಭವಾಗಿ ನಿಲ್ಲುತ್ತಾನೆ. ತನ್ನ ಹೊಟ್ಟೆಗೆ ತಣ್ನೀರ ಬಟ್ಟೆಯಾದರು ತನ್ನ ಮಕ್ಕಳ ಹಸಿವನ್ನು ಯಾವತ್ತು ಸಹಿಸುವುದಿಲ್ಲ. ತಾಯಿಯ ಗರ್ಭದಿಂದ ಅಳುತ್ತಾ ಹೊರ ಬರುವ ಕಂದಮ್ಮನನ್ನು ನೋಡಲು ಎಲ್ಲರಿಗಿಂತಲೂ ತುದಿಗಾಲಿನಲ್ಲಿ ಕಾತರತೆಯಿಂದ ಕಾಯುತ್ತಿರುತ್ತಾನೆ. ಮನದಲ್ಲಿ ಭಯ, ಗೊಂದಲ, ಇವೆಲ್ಲದರ ನಡುವೆಯೂ ಒಂದು ಬಾರಿ ತನ್ನ ಮಗುವಿನ ಮೊಗವನ್ನು ಕಂಡಾಕ್ಷಣ ಕಣ್ಣಿಂದ ಹಾಗೇ ತೃಪ್ತಿ ಭಾವನೆಯ ಆನಂದ ಭಾಷ್ಪ ಹರಿದು ಬರುತ್ತದೆ. ಇಡೀ ಪ್ರಪಂಚವನ್ನು ಗೆದ್ದ ಸಂತಸ ತಂದೆಯಾದನಿಗೆ ಅನುಭವವಾಗುತ್ತದೆ. ಪ್ರತಿಯೊಬ್ಬನಿಗೂ ತಾನು ಅಪ್ಪನಾದೆ ಎಂದರೆ ತಾನು ರಾಜನಾದಂತೆ ಬೀಗುತ್ತಾನೆ.
ಇದನ್ನೂ ಓದಿ:ವಿಮಾನದಲ್ಲಿ ಆನ್ ಆಗದ ಎಸಿ.. ಸೆಕೆ ತಡೆದುಕೊಳ್ಳಲು ಟಿಶ್ಯೂ ಮೊರೆ ಹೋದ ಪ್ರಯಾಣಿಕರು..