ಹೊಸಕೋಟೆ:ಉಪಚುನಾವಣೆ ಕಾವು ಏರತೊಡಗಿದಂತೆ ಅಭ್ಯರ್ಥಿಗಳ ಆರೋಪ, ಪ್ರತ್ಯಾರೋಪ ತಾರಕಕ್ಕೇರುತ್ತಿದ್ದು, ಬಚ್ಚೇಗೌಡ ಕುಟುಂಬ ಭೂಕಬಳಿಕೆ ಮಾಡಿದೆ ಎಂಬ ಎಂಟಿಬಿ ನಾಗರಾಜ್ ಆರೋಪಕ್ಕೆ ಶರತ್ ಬಚ್ಚೇಗೌಡ ಖಡಕ್ಕಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.
ಶರತ್ ಬಚ್ಚೇಗೌಡ, ಪಕ್ಷೇತರ ಅಭ್ಯರ್ಥಿ ಈಗ ನನಗೆ 39 ವರ್ಷ ವಯಸ್ಸು. ಈ ವಯಸ್ಸಿನಲ್ಲಿ 269 ಎಕರೆ ಜಮೀನನ್ನು ಕಬಳಿಕೆ ಹೇಗೆ ಮಾಡಿಕೊಳ್ಳೋದಕ್ಕೆ ಆಗುತ್ತದೆ? ನಾನು 18 ವರ್ಷ ವಯಸ್ಸು ಇರುವಾಗ ವಿದೇಶಕ್ಕೆ ಹೋಗಿ 10 ವರ್ಷ ಅಲ್ಲಿಯೇ ಇದ್ದೆ, ನನಗೂ ಅದಕ್ಕೂ ಸಂಬಂಧವಿಲ್ಲ. ಇಲ್ಲಿ ಅಭ್ಯರ್ಥಿ ಬಚ್ಚೇಗೌಡ ಅಲ್ಲ, ಶರತ್ ಬಚ್ಚೇಗೌಡ ಅಭ್ಯರ್ಥಿ. ಬಚ್ಚೇಗೌಡ ಅವರ ಮೇಲೆ ಆರೋಪ ಮಾಡಿದ್ರೆ, ಅವರನ್ನೇ ಕೇಳಬೇಕು. ಅದು ಬಿಜೆಪಿಯವರ ಆಂತರಿಕ ವಿಚಾರ ಅದಕ್ಕೂ ನನಗೂ ಸಂಭಂದವಿಲ್ಲ. ನಾನು ಬಿಜೆಪಿಯಲ್ಲಿಲ್ಲ ಅವರು ಬಿಜೆಪಿಯ ಸಂಸದರಾಗಿರುವುದರಿಂದ ಅವರ ಆಂತರಿಕ ವಿಚಾರ ಅವರೇ ಕೂತು ಬಗೆಹರಿಸಿಕೊಳ್ಳಬೇಕಿದೆ, ಇದರಲ್ಲಿ ನನ್ನನ್ನು ಎಳೆದು ತರಬೇಡಿ ಎಂದರು.
ಅನರ್ಹ ಶಾಸಕ ಎಂಟಿಬಿ ನಾಗರಾಜ್ ಹತಾಶರಾಗಿ ಮಾತನಾಡುತ್ತಿದ್ದು, ಮೊದಲಿಗೆ ಶರತ್ ಬಚ್ಚೇಗೌಡ ಮಾರಾಟ ಅದ್ರು, ಬೆನ್ನಿಗೆ ಚೂರಿ ಹಾಕಿದ್ರು, ಗೂಂಡಾಗಿರಿ ಮಾಡಿದ್ರು ಅಂದರು. ಇದೀಗ ಭೂಕಬಳಿಕೆ ಮಾಡಿಕೊಂಡಿದ್ದಾನೆ ಅಂತಿದ್ದಾರೆ. ಇನ್ನು ಎರಡು ಮೂರು ದಿನಗಳಾದ್ರೆ ಇನ್ಯಾವೆಲ್ಲ ಆರೋಪಗಳನ್ನು ಮಾಡುತ್ತಾರೋ ಗೊತ್ತಿಲ್ಲ. ಪ್ರಜಾಪ್ರಭುತ್ವದಲ್ಲಿ ಚುನಾವಣಾ ಪ್ರಕ್ರಿಯೆ ಇಷ್ಟೊಂದು ಕೆಳ ಮಟ್ಟಕ್ಕೆ ಇಳಿಯುತ್ತದೆ ಅಂತ ನಾನು ನಿರೀಕ್ಷೆ ಮಾಡಿರಲಿಲ್ಲ. ಹತಾಶರಾದರೂ ಸಹ ಒಂದು ಇತಿಮಿತಿ ಇರುತ್ತದೆ. ಈ ತರ ನಾನಾ ಆರೋಪಗಳನ್ನು ಮಾಡುವುದು ಅವರ ವಯಸ್ಸಿಗೆ ಶೋಭೆ ತರುವಂಥದ್ದಲ್ಲ ಎಂದರು.
ಇನ್ನು ನಳೀನ್ ಕುಮಾರ್ ಕಟೀಲ್ ಅವರು, ನಾನು ಗೆದ್ದ ಪಕ್ಷದಲ್ಲಿ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಅಂತ ಹೇಳಿದ್ದಾರೆ. ಹಾಗೆ ನಾನು ಸಹ ಎಲ್ಲೂ ಯಾವ ಪಕ್ಷಕ್ಕೆ ಸೇರುತ್ತೇನೆಂದು ಹೇಳಿಲ್ಲ. ಈಗಾಗಲೇ ನಾವು ಕೂಡ ಸ್ಪಷ್ಟವಾಗಿ ಹೇಳಿದ್ದೇವೆ. ನಾವು ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದೇವೆ ಸ್ವತಂತ್ರವಾಗಿಯೇ ಇರುತ್ತೇವೆ. ಯಾವುದೇ ಒಂದು ಪಕ್ಷಕ್ಕೆ ಬೆಂಬಲ ನೀಡುವ ಮುಂಚೆ ಕ್ಷೇತ್ರದ ಮತದಾರರ ಸಲಹೆ ತೆಗದುಕೊಂಡೇ ಮುಂದಿನ ಹೆಜ್ಜೆ ಇಡೋದು. ನನ್ನ ಪರ ಮತದಾರರ ಬೆಂಬಲ ಏನಿದೆ ಆ ಅಲೆಯನ್ನು ತಪ್ಪಿಸಲು ದುರುದ್ದೇಶದಿಂದ ಈ ರೀತಿ ಎಂಟಿಬಿ ನಾಗರಾಜ್ ಮಾತನಾಡುತ್ತಿದ್ದಾರೆ ಎಂದು ಶರತ್ ತಿರುಗೇಟು ನೀಡಿದ್ದಾರೆ.