ಬೆಂಗಳೂರು: ಹೊಸಕೋಟೆ ವಿಧಾನಸಭಾ ಕ್ಷೇತ್ರದ ಕಸಬಾ ಹೋಬಳಿಯ ಕೊರಳೂರು ಗ್ರಾಮದಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ್ ಯೋಜನೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿದೆ. ಆದರೆ ಕ್ಷೇತ್ರದ ಶಾಸಕರಿಗೆ ಮಾಹಿತಿ ನೀಡದೆ ವಿಧಾನ ಪರಿಷತ್ ಸದಸ್ಯರಾದ ಎನ್. ನಾಗರಾಜ್ ಪೂಜೆ ನೆರವೇರಿಸಿರುವುದನ್ನು ವಿರೋಧಿಸಿ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡರವರು ಎಂಟಿಬಿ ನಾಗರಾಜ್ ವಿರುದ್ಧ ಕಿಡಿಕಾರಿದ್ದಾರೆ.
ತಾಲೂಕಿನಲ್ಲಿ ತಮ್ಮ ಆಡಳಿತದಲ್ಲಿ ಅನವಶ್ಯಕವಾಗಿ ಹಸ್ತಕ್ಷೇಪ ಮಾಡಿರುವ ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಸಂವಿಧಾನಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಶಾಸಕ ಶರತ್ ಬಚ್ಚೇಗೌಡ ಆರೋಪಿಸಿದರು.
ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ, ಮುಖ್ಯಮಂತ್ರಿಗಳಾಗಲೀ ಯಾವುದೇ ಸ್ಥಳದಲ್ಲಿ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಸ್ಥಳೀಯ ಶಾಸಕರೇ ಅಂತಹ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಬೇಕು. ಆದರೆ ಆ .2ರಂದು ತಾಲೂಕಿನ ಕೊರಳೂರು ಗ್ರಾಮದ ಸ್ಥಳದಲ್ಲಿ ಜನರನ್ನು ಗುಂಪುಕಟ್ಟಿಕೊಂಡು ರಸ್ತೆ ಕಾಮಗಾರಿಗೆ ಪೂಜೆ ಮಾಡುವ ಮೂಲಕ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದರು.
ಎಂಎಲ್ಸಿ ಎಂಟಿಬಿ ನಾಗರಾಜ್ ಕಳೆದ ಏಳೆಂಟು ತಿಂಗಳಿನಿಂದ ಕಾರಿನಲ್ಲಿ ಗಡಾರಿ ಇಟ್ಟುಕೊಂಡು ಓಡಾಡುತ್ತಿದ್ದರು ಅಂತ ಗೊತ್ತಿತ್ತು. ಅದು ತುಕ್ಕು ಹಿಡಿದಿದ್ದು, ಇದೀಗ ತುಕ್ಕು ಹಿಡಿದ ಗಡಾರಿಗೆ ಪಾಲಿಶ್ ಮಾಡಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.
ಇನ್ನು, ಮೇಲ್ಮನೆಯಲ್ಲಿರುವವರು ಆ ಸ್ಥಾನಕ್ಕೆ ತಕ್ಕುದಾಗಿ ನಡೆದುಕೊಳ್ಳಬೇಕು. ಸಿಎಂ ಮತ್ತು ಸರ್ಕಾರದ ಬೆಂಬಲವಿದೆ ಅಂತ ಇಷ್ಟ ಬಂದ ಹಾಗೆ ಮಾಡ್ತಿದ್ದಾರೆ. ಮುಂದೆ ಏನಾದ್ರೂ ಕ್ಷೇತ್ರದಲ್ಲಿ ಅಹಿತಕರ ಘಟನೆಗಳು ನಡೆದರೆ ಅದಕ್ಕೆ ಎಂಟಿಬಿ ಮತ್ತು ಸರ್ಕಾರವೇ ನೇರ ಹೊಣೆ ಎಂದರು.