ದೇವನಹಳ್ಳಿ: ಜೈಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಮದ್ಯಪಾನ ಮಾಡಿ ಬಂದಿದ್ದ ವ್ಯಕ್ತಿಯೊಬ್ಬ ಮಹಿಳೆಯ ಕೈ ಹಿಡಿದು ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿದೆ. ಆರೋಪಿ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ದೇವನಹಳ್ಳಿ ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 17ರಂದು ಇಂಡಿಗೋ ಏರ್ಲೈನ್ಸ್ನ 6E556 ವಿಮಾನವು ಜೈಪುರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವಾಗ ಘಟನೆ ನಡೆದಿದೆ. 27ಡಿ ಸಂಖ್ಯೆಯ ಸೀಟ್ನಲ್ಲಿ ಕುಳಿತಿದ್ದ ರಣಧೀರ್ ಸಿಂಗ್ ಎಂಬಾತ ಮಹಿಳಾ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಮಹಿಳಾ ಸಹ ಪ್ರಯಾಣಿಕರ ಕೈ ಹಿಡಿದು ಅವಾಚ್ಯ ಶಬ್ದಗಳಿಂದಲೂ ಬೈಯ್ದುಕೊಳ್ಳುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಸಂತ್ರಸ್ತ ಮಹಿಳೆ ಆರೋಪಿ ವಿರುದ್ಧ ಐಪಿಸಿ ಕಲಂ 354 ಎ (ಲೈಂಗಿಕ ಕಿರುಕುಳ) ಕಾಯ್ದೆಯಡಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಇತ್ತೀಚಿನ ಪ್ರಕರಣಗಳು-ಗಗನಸಖಿ ಜೊತೆ ಅಸಭ್ಯ ವರ್ತನೆ:ವಿಮಾನದಲ್ಲಿ ಗಗನಸಖಿಯೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ವಿದೇಶಿ ವ್ಯಕ್ತಿಯೊಬ್ಬನನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯ ಪೊಲೀಸರು ಕಳೆದ ಆಗಸ್ಟ್ ತಿಂಗಳಲ್ಲಿ ಬಂಧಿಸಿದ್ದರು. ಮಾಲ್ಡೀವ್ಸ್ ಮೂಲದ ಅಕ್ರಂ ಅಹಮದ್ (51) ಬಂಧಿತ ಆರೋಪಿ. 33 ವರ್ಷದ ಗಗನಸಖಿ ನೀಡಿದ ದೂರಿನ ಅನ್ವಯ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದರು.