ಬೆಂಗಳೂರು:ಇಡೀ ಸಿಲಿಕಾನ್ ಸಿಟಿಯ ಅರ್ಧಕ್ಕೂ ಹೆಚ್ಚು ತ್ಯಾಜ್ಯ ನಗರದ ಹೊರವಲಯಗಳ ಕಲ್ಲು ಕ್ವಾರಿಗೆ ತೆಗೆದುಕೊಂಡು ಹೋಗಿ ಸುರಿಯಲಾಗುತ್ತೆ. ಬೆಳ್ಳಳ್ಳಿ ಕ್ವಾರಿ ಈಗಾಗಲೇ ಭರ್ತಿಯಾಗಿದೆ. ಆದರೆ, ಈವರೆಗೆ ತ್ಯಾಜ್ಯದ ವಾಸನೆ, ಪರಿಸರ ಮಾಲಿನ್ಯದಿಂದ ತೊಂದರೆ ಅನುಭವಿಸಿದ್ದ ಬೆಳ್ಳಳ್ಳಿ ಜನರಿಗೆ ಉಚಿತವಾಗಿ ಅದೇ ಕಸದಿಂದ ಉತ್ಪತ್ತಿಯಾದ ಗ್ಯಾಸ್ ವಿತರಿಸಲು ಪಾಲಿಕೆ ಚಿಂತನೆ ನಡೆಸಿದೆ.
ಈ ಯೋಜನೆ ಯಶಸ್ವಿಯಾದರೆ ಸುಮಾರು ಏಳು ವರ್ಷಗಳ ಕಾಲ ಐದು ಸಾವಿರ ಕುಟುಂಬಗಳು ಒಲೆ ಉರಿಸಲು ಪ್ರಯೋಜನ ಪಡೆಯಲಿವೆ ಎಂದು ಘನತ್ಯಾಜ್ಯ ಜಂಟಿ ಆಯುಕ್ತ ಸರ್ಫರಾಜ್ ಖಾನ್ ತಿಳಿಸಿದರು. ಬೆಳ್ಳಳ್ಳಿ ತ್ಯಾಜ್ಯ ಭೂಭರ್ತಿ ಘಟಕದ ಸುತ್ತಮುತ್ತ ಮಿಟಗಾನಹಳ್ಳಿ, ಹೊಸೂರು ಬಂಡೆ, ಕಾಡು ಸೊಣ್ಣಪ್ಪನಹಳ್ಳಿ ಗ್ರಾಮಗಳಿವೆ. ಕಸ ಕ್ವಾರಿಯಿಂದ ಹೊರಬರುತ್ತಿದ್ದ ದುರ್ವಾಸನೆ, ಸೊಳ್ಳೆ, ಕಲುಷಿತ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದರು.