ಕರ್ನಾಟಕ

karnataka

ETV Bharat / state

ಐದು ತರಗತಿಗಳಿಗೆ ಒಂದೇ ಕೊಠಡಿ, ರಂಗಮಂದಿರಕ್ಕೆ ಟಾರ್ಪಲ್ ಕಟ್ಟಿ ಮಕ್ಕಳಿಗೆ ಪಾಠ - ಶಾಲಾ ಕೊಠಡಿ ದುರಸ್ತಿ

ಸಾದಪ್ಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 30 ಮಕ್ಕಳು ಕಲಿಯುತ್ತಿದ್ದು, ಇರುವ ಒಂದು ಕೊಠಡಿಯೂ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಮಳೆ ಬಂದಾಗ ನೀರು ಸೋರುತ್ತಿದ್ದು, ಮಕ್ಕಳು ಈ ದುಸ್ಥಿತಿಯಲ್ಲೇ ಪಾಠ ಕೇಳಬೇಕು.

Sadappanahalli Govt  School
ಸಾದಪ್ಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

By

Published : Jul 29, 2022, 9:20 AM IST

ಹೊಸಕೋಟೆ: ಪ್ರತಿಯೊಂದು ಮಗುವಿಗೂ ಶಿಕ್ಷಣ ದೊರೆಯಬೇಕೆನ್ನುವುದು ಸರ್ಕಾರದ ಅಪೇಕ್ಷೆ ಮತ್ತು ಘೋಷಣೆ. ಆದರೆ ಕೆಲವು ಶಾಲೆಗಳ ದುಸ್ಥಿತಿ ಗಮನಿಸಿದ್ರೆ ಈ ಬಗ್ಗೆ ಸರ್ಕಾರಕ್ಕೆ ನೈಜ ಕಾಳಜಿಯೇ ಇದ್ದಂತ್ತಿಲ್ಲ. ಇದಕ್ಕೆ ಇದೊಂದು ಸ್ಪಷ್ಟ ಉದಾಹರಣೆ.


ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿ ವ್ಯಾಪ್ತಿಯ ಸಾದಪ್ಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 30 ಮಕ್ಕಳು ಕಲಿಯುತ್ತಿದ್ದು, ಶಾಲಾ ದುರಸ್ತಿಯಲ್ಲಿದ್ದ ಕಟ್ಟಡಗಳೆಲ್ಲಾ ಇದೀಗ ನೆಲಸಮವಾಗಿದೆ. ಐದು ತರಗತಿಗಳಿಗೆ ಒಂದೇ ಕೊಠಡಿಯಿದ್ದು, ಮೂವತ್ತು ಮಕ್ಕಳಿಗೆ ಅದರಲ್ಲೇ ಪಾಠ ಹೇಳಿಕೊಡುವ ಪರಿಸ್ಥಿತಿ ಇಲ್ಲಿಯದ್ದು.

1996 ರಲ್ಲಿ ನಿರ್ಮಾಣ ಮಾಡಿದ್ದ ಎರಡು ಶಾಲಾ ಕೊಠಡಿಗಳು ದುರಸ್ತಿಯಿಂದ ಕೂಡಿದ್ದು, ಅದರಲ್ಲಿ ಒಂದನ್ನು ಎರಡು ವರ್ಷಗಳ ಹಿಂದೆ ಕೆಡವಲಾಗಿದೆ. ಮತ್ತೊಂದು ಕೊಠಡಿ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಮಳೆ ಬಂದಾಗ ನೀರು ಸೋರುತ್ತದೆ. ಇದರಿಂದ ಪ್ರತಿ ವರ್ಷ ದಾಖಲಾತಿ ಕ್ಷೀಣಿಸುತ್ತಿದೆ. ಗ್ರಾಮದ ಮಕ್ಕಳು ಎರಡು ಮೂರು ಕಿ.ಮೀಟರ್ ನಡೆದುಕೊಂಡು ಬೇರೆ ಗ್ರಾಮದ ಶಾಲೆಗಳಿಗೆ ಹೋಗುತ್ತಿದ್ದಾರೆ.

ರಂಗಮಂದಿರದಲ್ಲಿ ಪಾಠ: ಶಾಲೆಯಲ್ಲಿ ಕೇವಲ ಒಂದೇ ಕೊಠಡಿ ಇರುವ ಕಾರಣ ಎಲ್ಲಾ ತರಗತಿಯ ಮಕ್ಕಳಿಗೆ ಪಾಠ ಮಾಡಲು ತೊಂದರೆಯಾಗುತ್ತಿದೆ. ಅಧ್ಯಾಪಕರು ಕೆಲವು ಮಕ್ಕಳಿಗೆ ಶಾಲಾ ರಂಗಮಂದಿರದಲ್ಲಿ ಟಾರ್ಪಲ್ ಕಟ್ಟಿಕೊಂಡು ಪಾಠ ಮಾಡುತ್ತಿದ್ದಾರೆ. ಇದರಿಂದಾಗಿ ಪೋಷಕರು ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ.

ಕೊಠಡಿ ನಿರ್ಮಾಣಕ್ಕಾಗಿ ಸಾಲು ಸಾಲು ಪತ್ರ: ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಿಕೊಡುವಂತೆ ಸರ್ಕಾರ, ಜನಪ್ರತಿನಿಧಿಗಳಿಗೆ, ಪಂಚಾಯತ್​ ಅಧಿಕಾರಿಗಳಿಗೆ, ಶಿಕ್ಷಣ ಕ್ಷೇತ್ರಾಧಿಕಾರಿಗಳಿಗೆ ಪತ್ರ ಬರೆದರೂ ಸಹ ಯಾರೂ ಈವರೆಗೆ ಕಿಂಚಿತ್ತೂ ಗಮನಹರಿಸಿಲ್ಲ.

ಗ್ರಾಮದ ಮುಖಂಡರಾದ ಮಂಜುನಾಥ್ ಮಾತನಾಡಿ, "ಸಾದಪ್ಪನಹಳ್ಳಿ ಗ್ರಾಮದಲ್ಲಿ ಶಾಲೆ ಇದ್ದರೂ ಕೊಠಡಿಗಳಿಲ್ಲದ ಕಾರಣ ವಿದ್ಯಾರ್ಥಿಗಳು ಒಂದೇ ರೂಮ್​ನಲ್ಲಿ ಕಲಿಯುತ್ತಿದ್ದಾರೆ. ಈ ಬಗ್ಗೆ ಅಧ್ಯಾಪಕರು ಮತ್ತು ಗ್ರಾಮದ ಜನ ಸಾಕಷ್ಟು ಬಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದಾರೆ. ಆದ್ರೆ ಯಾರೊಬ್ಬರೂ ಕಳೆದ ಎರಡು ವರ್ಷಗಳಿಂದ ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮಾಡುತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ:ಸರ್ಕಾರಿ ಶಾಲೆಯ ದುಃಸ್ಥಿತಿ : ಜೀವ ಭಯದಲ್ಲಿ ಪಾಠ ಕಲಿಯುತ್ತಿರುವ ಮಕ್ಕಳು

ABOUT THE AUTHOR

...view details