ದೇವನಹಳ್ಳಿ: ಮಹಿಳೆಯೊಬ್ಬರ ಬಳಿ ಮಾನ್ಯವಾದ ವೀಸಾ ಇದ್ದರೂ ವಿಮಾನ ಹತ್ತಲು ನಿರಾಕರಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬ್ರಿಟಿಷ್ ಏರ್ವೇಸ್ ವಿರುದ್ಧ ತೀರ್ಪು ಪ್ರಕಟಿಸಿರುವ ಗ್ರಾಹಕರ ಕೋರ್ಟ್, ಮಹಿಳಾ ಪ್ರಯಾಣಿಕರಿಗೆ 2.3 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ.
ಬೆಂಗಳೂರಿನ ನಾಗರಬಾವಿ ನಿವಾಸಿ ಧನಲಕ್ಷ್ಮೀ ಎಂಬುವರು 10 ದಿನಗಳ ಯುರೋಪ್ ಪ್ರವಾಸ ಮಾಡಲು ಸಿದ್ಧರಾಗಿದ್ದರು. 2019 ಎಪ್ರಿಲ್ 8 ರಂದು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ ಮೂಲಕ ಬಾರ್ಸಿಲೋನಾಗೆ ಬ್ರಿಟಿಷ್ ಏರ್ವೇಸ್ ಮೂಲಕ ಪ್ರಯಾಣಿಸಲಿದ್ದರು. ಆದರೆ, ವಿಮಾನ ಹತ್ತುವ ಮುನ್ನ ಕೆಐಎಎಲ್ನಲ್ಲಿ ಬ್ರಿಟಿಷ್ ಏರ್ವೇಸ್ ಚೆಕ್ ಇನ್ ಕೌಂಟರ್ನಲ್ಲಿ ನೇರ ಏರ್‌ಸೈಡ್ ಟ್ರಾನ್ಸಿಟ್ ವೀಸಾ (DATV) ಇಲ್ಲ ಎನ್ನುವ ಕಾರಣ ನೀಡಿ ವಿಮಾನ ಹತ್ತಲು ನಿರಾಕರಿಸಿತ್ತು.
ಇದನ್ನೂ ಓದಿ:ಎಂಬತ್ತೆರಡು ಸಾವಿರ ವಿದ್ಯಾರ್ಥಿಗಳಿಗೆ ಅಮೆರಿಕದ ವೀಸಾ.. ಇದು ಇತರ ರಾಷ್ಟ್ರಗಳಿಗಿಂತ ಹೆಚ್ಚು
ಏರ್‌ಸೈಡ್ ಟ್ರಾನ್ಸಿಟ್ ವೀಸಾ ಹೊಂದಿರುವ ಪ್ರಯಾಣಿಕರು ಲಂಡನ್ ಮೂಲಕ ಯಾವುದೇ ದೇಶಕ್ಕೆ ಪ್ರಯಾಣಿಸಬಹುದು. ಆದರೆ, ಆಸ್ಟ್ರೇಲಿಯಾ ವೀಸಾ ಮತ್ತು ಭಾರತೀಯ ಪಾರ್ಸ್ ಪೋರ್ಟ್ ಇದ್ದರೆ DATV ವೀಸಾದ ಅವಶ್ಯಕತೆ ಇರುವುದಿಲ್ಲ. ಧನಲಕ್ಷ್ಮೀಯವರ ಬಳಿ ಆಸ್ಟ್ರೇಲಿಯಾ ವೀಸಾ ಮತ್ತು ಭಾರತೀಯ ಪಾಸ್ ಪೋರ್ಟ್ ಇತ್ತು. ಬ್ರಿಟಿಷ್ ಏರ್ವೇಸ್ ಸಿಂಬ್ಬದಿ ವರ್ತನೆಯಿಂದ ಮಾನಸಿಕ ಅಘಾತಕ್ಕೆ ಒಳಗಾದ ಅವರು, ಇಮೇಲ್ ಮೂಲಕ ಬ್ರಿಟಿಷ್ ಏರ್ವೇಸ್ಗೆ ದೂರು ಸಲ್ಲಿಸಿದರು. ಇದಕ್ಕೆ ಪ್ರತಿಯಾಗಿ ಬ್ರಿಟಿಷ್ ಏರ್ವೇಸ್ ತನ್ನ ಸಿಬ್ಬಂದಿ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿ, ಕ್ಷಮೆ ಕೇಳಿತು. ಜೊತೆಗೆ 600 ಯುರೋಗಳನ್ನು ಕೊಡಲು ಮುಂದಾಗಿತ್ತು.
ಇದನ್ನೂ ಓದಿ:ಭಾರತದಲ್ಲಿ ಇ-ವೀಸಾ ವ್ಯವಸ್ಥೆ ಆರಂಭಿಸಲಿದೆ ದ.ಆಫ್ರಿಕಾ ಪ್ರವಾಸೋದ್ಯಮ ಇಲಾಖೆ
2021ರ ಏಪ್ರಿಲ್ನಲ್ಲಿ ಧನಲಕ್ಷ್ಮೀಯವರು ಶಾಂತಿನಗರದಲ್ಲಿರುವ ಬೆಂಗಳೂರು ಗ್ರಾಮಾಂತರ ಮತ್ತು ನಗರ 1 ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಕೋರ್ಟ್ನಲ್ಲಿ ಮೊಕದ್ದಮೆ ಹೂಡಿದ್ದರು. 2022ರ ಆಗಸ್ಟ್ 20 ರಂದು ತೀರ್ಪು ನೀಡಿದ ಗ್ರಾಹಕ ನ್ಯಾಯಾಲಯ, ಬ್ರಿಟಿಷ್ ಏರ್ವೇಸ್ ಮತ್ತು ಕೆಐಎ ಯಲ್ಲಿನ ಅದರ ಪ್ರತಿನಿಧಿಗಳು ಜಂಟಿಯಾಗಿ 2.3 ಲಕ್ಷ ರೂಪಾಯಿಗಳನ್ನು ಪಾವತಿಸಬೇಕು ಎಂದು ಆದೇಶಿಸಿದೆ. ಇದರಲ್ಲಿ 1 ಲಕ್ಷ ಹಾನಿ, 15,000 ರೂ. ಪ್ರಯಾಣಿಕರ ವ್ಯಾಜ್ಯ ವೆಚ್ಚಗಳು, 46,000 ಬಡ್ಡಿಯೊಂದಿಗೆ ಟಿಕೆಟ್ ಮರುಪಾವತಿ ಮತ್ತು 75,000 ವಿವಿಧ ಪ್ರವಾಸ ವೆಚ್ಚ ಸೇರಿದೆ. ಜೊತೆಗೆ 30 ದಿನಗಳೊಳಗೆ ಮೊತ್ತವನ್ನು ಪಾವತಿಸುವಂತೆ ಆದೇಶಿಸಲಾಗಿದೆ.
ಇದನ್ನೂ ಓದಿ:ವೀಸಾ ಭ್ರಷ್ಟಾಚಾರ ಪ್ರಕರಣ: ಕಾರ್ತಿ ಚಿದಂಬರಂ ನಿವಾಸದ ಮೇಲೆ ಮತ್ತೆ ಸಿಬಿಐ ದಾಳಿ!