ದೊಡ್ಡಬಳ್ಳಾಪುರ:ರಾತ್ರಿ ಊಟಕ್ಕೆಂದು ಹೋಟೆಲ್ಗೆ ಬಂದ ರೌಡಿಶೀಟರ್ 'ಊಟ ಇಲ್ಲ ಖಾಲಿ' ಎಂದು ಹೇಳಿದ ಹೋಟೆಲ್ ಮಾಲೀಕನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ದೊಡ್ಡಬಳ್ಳಾಪುರ ನಗರದಲ್ಲಿ ಹೋಟೆಲ್ ಮಾಲೀಕನ ಎದೆ ಮತ್ತು ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದ ರೌಡಿಶೀಟರ್ ಯಲಪ್ಪ ಪರಾರಿಯಾಗಿದ್ದಾನೆ. ತ್ಯಾಗರಾಜನಗರ ನಿವಾಸಿ ಚಂದ್ರಶೇಖರ್ (30) ಚಾಕು ಇರಿತಕ್ಕೊಳಗಾದವರು. ಚಾಕುವಿನಿಂದ ಇರಿದ ಆರೋಪಿ ರೌಡಿಶೀಟರ್ ಯಲ್ಲಪ್ಪ ಹಾಗೂ ಆತನ ಇಬ್ಬರು ಸಹಚರರು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಚಂದ್ರಶೇಖರ್ ಹಲವು ವರ್ಷಗಳಿಂದ ಕೊಂಗಾಡಿಯಪ್ಪ ರಸ್ತೆಯಲ್ಲಿ ಹಲವು ಶಿವಗಂಗಾ ಹೆಸರಿನ ಹೋಟೆಲ್ ನಡೆಸುತ್ತಾರೆ. ಶುಕ್ರವಾರ ರಾತ್ರಿ ಹೋಟೆಲ್ ಮುಗಿಸಿಕೊಂಡು 10.15ರ ಸುಮಾರಿಗೆ ಮನೆಗೆ ತೆರಳಲು ನಿಂತಿದ್ದರು. ಈ ವೇಳೆ ಯಲ್ಲಪ್ಪ ಆತನ ಇಬ್ಬರು ಸಹಚರರ ಜೊತೆ ಬಿಯರ್ ಬಾಟೆಲ್ ಹಿಡಿದುಕೊಂಡು ಅಲ್ಲಿಗೆ ಬಂದಿದ್ದಾರೆ. ಊಟ ಇದೆಯೇ ಎಂದು ಕೇಳಿದ್ದಾರೆ. ಇದಕ್ಕೆ ಚಂದ್ರಶೇಖರ್ ಊಟ ಖಾಲಿಯಾಗಿದೆ ಎಂದು ತಿಳಿಸಿದ್ದಾರೆ. ಇಷ್ಟಕ್ಕೆ ಆಕ್ರೋಶಗೊಂಡ ಯಲ್ಲಪ್ಪ ಚಾಕು ತೆಗೆದುಕೊಂಡು ಚಂದ್ರಶೇಖರ್ ಎದೆ ಮತ್ತು ಹೊಟ್ಟೆ ಭಾಗಕ್ಕೆ ಮೂರು ಬಾರಿ ಇರಿದಿದ್ದಾರೆ. ಗಾಯಾಳು ಚಂದ್ರಶೇಖರ್ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.