ಕರ್ನಾಟಕ

karnataka

ETV Bharat / state

ರೈತರ ರಾಗಿಗೆ ಕಡಿಮೆ ಬೆಲೆ, ಗುತ್ತಿಗೆದಾರನ ರಾಗಿ ಚೀಲಕ್ಕೆ ಹೆಚ್ಚು ದರ: ಆರ್​ಟಿಐ ಕಾರ್ಯಕರ್ತರ ಆರೋಪ - ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ ಆರೋಪ

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಚೀಲಕ್ಕೆ ರೈತರಿಗೆ ಕಡಿಮೆ ಬೆಲೆ ನೀಡಿರುವ ಸರ್ಕಾರ, ಗುತ್ತಿಗೆದಾರರ ರಾಗಿ ಚೀಲಕ್ಕೆ ಹೆಚ್ಚು ಬೆಲೆ ನೀಡಿದೆ. ಇದರಲ್ಲಿ ಅಕ್ರಮ ನಡೆದಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ ಆರೋಪ ಮಾಡಿದೆ.

kn_bng
ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ ಮಾದ್ಯಮಗೋಷ್ಠಿ

By

Published : Dec 15, 2022, 9:17 AM IST

ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ ಮಾದ್ಯಮಗೋಷ್ಟಿ

ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ) : ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿಯನ್ನು ಸರ್ಕಾರ ಖರೀದಿ ಮಾಡುತ್ತೆ, ರೈತನ ರಾಗಿ ಚೀಲಕ್ಕೆ 22 ರೂಪಾಯಿ ನೀಡಿದ ಸರ್ಕಾರ ಗುತ್ತಿಗೆದಾರರ ರಾಗಿ ಚೀಲಕ್ಕೆ 44 ರೂಪಾಯಿ ನೀಡಿದೆ. ರೈತರಿಗೆ ನೀಡಲಾದ ಚೀಲ ವಿತರಣೆಯಲ್ಲಿ ಅಕ್ರಮ ನಡೆದಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ ಆರೋಪ ಮಾಡಿದೆ.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆಯ ಮಾಧ್ಯಮಗೋಷ್ಟಿಯಲ್ಲಿ, ರಾಜ್ಯ ಘಟಕದ ರಾಜ್ಯಾಧ್ಯಕ್ಷ ಹನುಮಂತರಾಯಪ್ಪ ಮಾತನಾಡಿ, ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸುವ ವೇಳೆ ರೈತರಿಗೆ ಸರ್ಕಾರ ಒಂದು ಚೀಲಕ್ಕೆ 22 ರೂಪಾಯಿ ನೀಡುತ್ತಿತ್ತು. ಈ ಹಣ ನೇರವಾಗಿ ರೈತನ ಅಕೌಂಟ್​ಗೆ ಹೋಗುತ್ತಿತ್ತು. ಆದರೆ ಈ ಬಾರಿ ಚೀಲದ ಹಣ ವಿತರಣೆ ಮಾಡುವ ಜವಾಬ್ದಾರಿಯನ್ನು ಗುತ್ತಿಗೆದಾರನಿಗೆ ನೀಡಲಾಗಿದೆ. ಅದು ರೈತನಿಗೆ ನೀಡುವ ಹಣದ ದುಪ್ಪಟ್ಟು ದರದಲ್ಲಿ ನೀಡಿದ್ದು, ಇದರಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದರು.

ಕಳೆದ ವರ್ಷ ತಾಲೂಕಿನಲ್ಲಿ ರಾಗಿ ಖರೀದಿ ವೇಳೆ ಚೀಲ ವಿತರಣೆಗೆಂದು ಇಬ್ಬರಿಗೆ ಗುತ್ತಿಗೆ ನೀಡಲಾಗಿತ್ತು. ಇದರಲ್ಲಿ ಒಬ್ಬರು ಚೀಲವನ್ನೇ ನೀಡಿಲ್ಲ. ಮತ್ತೊಬ್ಬರು ಕಳಪೆ ಚೀಲ ನೀಡಿ ಕೈತೊಳೆದುಕೊಂಡಿದ್ದಾರೆ. ಇದರಿಂದಾಗಿ ರೈತರಿಗೆ ನಷ್ಟವಾಗಿದೆ. ಈ ಕುರಿತಂತೆ ಮುಖ್ಯಮಂತ್ರಿ ಆದಿಯಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರು ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ.

ಬಳಿಕ ವೇದಿಕೆಯ ಕಾರ್ಯಾಧ್ಯಕ್ಷ ಡಿ.ಆನಂದ ಮೂರ್ತಿ ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಪಡೆಯಲಾದ ದಾಖಲೆ ಅನ್ವಯ ಕಳೆದ ವರ್ಷ 44 ರೂಪಾಯಿ ದರದಲ್ಲಿ ಇಬ್ಬರಿಗೆ ಗುತ್ತಿಗೆ ನೀಡಲಾಗಿದ್ದು, ಇದರಲ್ಲಿ ಒಬ್ಬರು ಅಧಿಕಾರಿಗಳ ಸಂಬಂಧಿಕರಾಗಿದ್ದಾರೆಂದು ದೂರಿದರು. ರೈತರಿಗೆ ಚೀಲಗಳು ವಿತರಣೆಯಾಗಿಲ್ಲವೆಂದು ಇಲಾಖೆಯೇ ನೋಟಿಸ್ ನೀಡಿದೆ.

ಟೆಂಡರ್ ಪಡೆದಿದ್ದಷ್ಟು ಚೀಲಗಳನ್ನು ರೈತರಿಗೆ ವಿತರಣೆ ಮಾಡಿಲ್ಲ, ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ರೈತರಿಂದ 50 ಕೆಜಿಯ ಚೀಲದಲ್ಲಿ 52 ಕೆಜಿ ರಾಗಿಯನ್ನು ರೈತರಿಂದ ಪಡೆಯಲಾಗುತ್ತಿದ್ದು, ರೈತರ ಖಾತೆಗೆ 50.5ಕೆಜಿ ತೂಕಕ್ಕೆ ಮಾತ್ರ ಹಣ ನೀಡಲಾಗುತ್ತಿದೆ. ಉಳಿದ ರಾಗಿಯ ಹಣವನ್ನು ಲಪಟಾಯಿಸಿರುವ ಅನುಮಾನ ಕಂಡು ಬಂದಿದೆ ಎಂದು ಆರೋಪಿಸಿದ ಅವರು, ಕೂಡಲೇ ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಕ್ರಮಕೈಗೊಂಡು, ಈ ಮುಂಚೆ ಇದ್ದಂತೆ ಚೀಲದ ಹಣವನ್ನು ರೈತರ ಖಾತೆಗೆ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.

ಇದನ್ನೂ ಓದಿ:ಗಡಿ ವಿವಾದ... ಸಚಿವರ ಸಮಿತಿ ರಚಿಸಿಕೊಳ್ಳುವಂತೆ ಅಮಿತ್ ಶಾ ಸೂಚನೆ: ಬೊಮ್ಮಾಯಿ

ABOUT THE AUTHOR

...view details