ನೆಲಮಂಗಲ: ನಗರದ ಖಾಸಗಿ ಆಸ್ಪತ್ರೆಯೊಂದ್ರಲ್ಲಿ ಶಸ್ತ್ರಚಿಕಿತ್ಸೆಯಾದ ವ್ಯಕ್ತಿಯೋರ್ವನನ್ನು ನೋಡಲು ಬಂದ ಸಂಬಂಧಿಕರ ಮೇಲೆ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಹಲ್ಲೆ ಮಾಡೋ ಮೂಲಕ ಗೂಂಡಾ ವರ್ತನೆ ತೋರಿದ್ದಾರೆ. ಪರಸ್ಪರ ಕೈ ಕೈ ಮಿಲಾಯಿಸಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನೆಲಮಂಗಲ ನಗರದ ಖಾಸಗಿ ಆಸ್ಪತ್ರೆಗೆ ತಡರಾತ್ರಿ ಯಲಹಂಕದಿಂದ ಲೋಕೇಶ್, ಮನೋಜ್ ಮತ್ತು ಮಂಜುನಾಥ್ ಎಂಬುವವರು ಬಂದಿದ್ದಾರೆ. ಲೋಕೇಶ್ ಎಂಬುವನ ತಂಗಿಯ ಪತಿ ರವಿಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದು, ನಿನ್ನೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರನ್ನು ನೋಡಲು ಬಂದ ಲೋಕೇಶ್ ಮತ್ತು ಸಂಬಂಧಿಕರಾದ ಮನೋಜ್, ಮಂಜುನಾಥ್ ಮೇಲೆ ವೈದ್ಯರಾದ ಡಾ. ಶ್ರೀನಿವಾಸ್ ಮತ್ತು ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ. ನಮ್ಮನ್ನು ರೂಮ್ನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿ ಡಾ. ಶ್ರೀನಿವಾಸ್ ಉದ್ಧಟತನ ತೋರಿದ್ದಾರೆ ಎಂದು ಹಲ್ಲೆಗೊಳಗಾದವರು ಆರೋಪಿಸಿದ್ದಾರೆ.
ಹಲ್ಲೆಗೊಳಗಾದವರ ಪ್ರತಿಕ್ರಿಯೆ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರು ಹೆಚ್ಚಿರುವ ಕಾರಣ ಒಟ್ಟಿಗೆ ಮೂವರು ಒಳ ಹೋಗಬೇಡಿ ಎಂದು ಸಿಬ್ಬಂದಿ ಹೇಳಿದ್ದಾರೆ. ಒಬ್ಬೊಬ್ಬರೇ ಹೋಗಿ ರೋಗಿಯನ್ನು ಮಾತಾಡಿಸಿಕೊಂಡು ಬಂದಿದ್ದಾರೆ. ಈ ಸಮಯದಲ್ಲಿ ಮೂರನೇ ವ್ಯಕ್ತಿ ಹೋಗುವ ಸಮಯದಲ್ಲಿ ಆತನನ್ನು ಆಸ್ಪತ್ರೆ ಸಿಬ್ಬಂದಿ ತಡೆದಿದ್ದಾರೆ. ಇದೇ ವಿಚಾರಕ್ಕೆ ಜಗಳವಾಗಿದೆ. ರೋಗಿಯನ್ನು ನೋಡಲು ಬಂದ ಮೂವರು ಮತ್ತು ಆಸ್ಪತ್ರೆಯ ಸಿಬ್ಬಂದಿ ಪರಸ್ಪರ ಕೈ ಮಿಲಾಯಿಸಿದ್ದಾರೆ. ಈ ಸಮಯದಲ್ಲಿ ವೈದ್ಯ ಶ್ರೀನಿವಾಸ್ ಮೂವರ ಮೇಲೂ ಕೈ ಮಾಡಿದ್ದಾರೆಂದು ಆರೋಪ ಮಾಡಲಾಗಿದೆ. ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ.
ಇದನ್ನೂ ಓದಿ:ಅವ್ಯವಸ್ಥೆಯ ಆಗರವಾದ ಕಿಮ್ಸ್ನ ಕೋವಿಡ್ ಐಸಿಯು ವಾರ್ಡ್: ವಿಡಿಯೋ ವೈರಲ್
ಹಲ್ಲೆಯ ವಿಚಾರ ನೆಲಮಂಗಲ ಪೊಲೀಸ್ ಠಾಣೆಗೆ ಬಂದಿದ್ದು, ಆಸ್ಪತ್ರೆಯ ಸಿಬ್ಬಂದಿ ಮತ್ತು ರೋಗಿಯ ಸಂಬಂಧಿ ಪರಸ್ಪರ ಆರೋಪ ಮಾಡುತ್ತಿದ್ದಾರೆ. ಅಸಲಿ ಸತ್ಯ ತನಿಖೆಯಿಂದ ಮಾತ್ರ ಹೊರ ಬರಬೇಕಿದೆ.