ನೆಲಮಂಗಲ (ಬೆಂಗಳೂರು): ಹಿರಿಯ ನಟಿ ಡಾ. ಎಂ. ಲೀಲಾವತಿಯವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆ ಅವರ ನಿವಾಸಕ್ಕೆ ಗಣ್ಯರು ಭೇಟಿ ಕೊಡುವ ಮೂಲಕ ಆರೋಗ್ಯ ವಿಚಾರಿಸುತ್ತಿದ್ದಾರೆ. ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಸಹ ಇಂದು ಬೆಳಗ್ಗೆ ಸೊಲದೇವನಹಳ್ಳಿಯ ಲೀಲಾವತಿ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ, ಸ್ಥಳೀಯ ಕಾಂಗ್ರೆಸ್ ಮುಖಂಡರು ಜೊತೆಯಲ್ಲಿದ್ದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ರಕ್ಷಾ ರಾಮಯ್ಯ, ಲೀಲಾವತಿಯವರ ಆರೋಗ್ಯ ನಿಧಾನವಾಗಿ ಚೇತರಿಕೆಯಾಗುತ್ತಿದೆ. ಶೀಘ್ರದಲ್ಲೇ ಗುಣಮುಖರಾಗಲಿದ್ದಾರೆ. ಹೈ ಶುಗರ್ ಪ್ರಮಾಣ ಕಡಿಮೆಯಾಗಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಎಂಎಸ್ ರಾಮಯ್ಯ ಕುಟುಂಬದಿಂದ ಯಾವುದೇ ರೀತಿಯ ವೈದ್ಯಕೀಯ ಸಹಾಯಕ್ಕೆ ಸಿದ್ಧ. ವಿನೋದ್ ರಾಜ್ ಸರ್ ಜೊತೆಗೆ ನಾವೆಲ್ಲ ಇದ್ದೇವೆ, ಅವರು ಏಕಾಂಗಿಯಲ್ಲ. ಸರ್ಕಾರ ಕೂಡ ಉಚಿತ ವೈದ್ಯಕೀಯ ನೆರವು ನೀಡುತ್ತಿರುವುದು ಶ್ಲಾಘನೀಯ. ಲೀಲಾವತಿ ಅವರ ಸರಳ ಜೀವನವೇ ನಮಗೆ ಆದರ್ಶ ಎಂದು ತಿಳಿಸಿದರು.
ಈಗಾಗಲೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ಶಿವ ರಾಜ್ಕುಮಾರ್, ಗೀತಾ ಶಿವರಾಜ್ಕುಮಾರ್, ದರ್ಶನ್ ಸೇರಿದಂತೆ ಹಲವರು ಲೀಲಾವತಿಯವರ ಮನೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಇತ್ತೀಚೆಗಷ್ಟೇ ಲೀಲಾವತಿಯವರ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ನಟಿಯ ಯೋಗಕ್ಷೇಮ ವಿಚಾರಿಸಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಿದರೆ ವೈದ್ಯಕೀಯ ವೆಚ್ಚ ನೋಡಿಕೊಳ್ಳುತ್ತೇವೆ. ಸರ್ಕಾರದಿಂದ ಸಹಾಯಕ್ಕೆ ಸಿದ್ಧ ಎಂದು ತಿಳಿಸಿದ್ದರು.
ಮಾಧ್ಯಮದೊಂದಿಗೆ ಮಾತನಾಡಿದ್ದ ಶಿವಣ್ಣ, ಆರೋಗ್ಯ ಸುಧಾರಿಸುತ್ತಿದೆ, ನಮ್ಮ ದನಿ ಮೂಲಕ ನಮ್ಮನ್ನು ಕಂಡುಹಿಡಿಯುತ್ತಾರೆ. ಒಳ್ಳೆ ಮನಸ್ಸಿರುವ ವ್ಯಕ್ತಿತ್ವ ಅವರದ್ದು. ಅವರ ಈ ಒಳ್ಳೆ ಗುಣದಿಂದಲೇ ಪ್ರತಿಯೊಬ್ಬರಿಗೂ ಇಷ್ಟವಾಗುತ್ತಾರೆ. ಆರೋಗ್ಯ ಚೇತರಿಸಿಕೊಳ್ಳಲಿದೆ, ಭಗವಂತನ ಅಶೀರ್ವಾದದ ಜೊತೆಗೆ ಜನರ ಪ್ರೀತಿ ಅವರೊಂದಿಗಿದೆ ಎಂದು ಹೇಳಿದ್ದರು..