ದೊಡ್ಡಬಳ್ಳಾಪುರ: ತಾಲೂಕಿನ ಹೊಸಹಳ್ಳಿಯಲ್ಲಿ ನಡೆಯಲಿರುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಜಿಲ್ಲಾಧಿಕಾರಿಗಳ ನಡೆ, ಹಳ್ಳಿ ಕಡೆ' ಕಾರ್ಯಕ್ರಮದ ಉದ್ಘಾಟನೆಯನ್ನು ಕಂದಾಯ ಸಚಿವ ಆರ್ ಅಶೋಕ್ ಮಾಡಲಿದ್ದು, ಸಚಿವರು ಫೆ.20ರಂದು ಗ್ರಾಮ ವಾಸ್ತವ್ಯ ಹೂಡಲಿದ್ದಾರೆ.
ಜನರ ಸಮಸ್ಯೆಗಳಿಗೆ ಗ್ರಾಮದಲ್ಲಿಯೇ ಪರಿಹಾರ ನೀಡುವ "ಜಿಲ್ಲಾಧಿಕಾರಿ ನಡೆ-ಹಳ್ಳಿ ಕಡೆ" ಎಂಬ ವಿನೂತನ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಪ್ರತಿ ತಿಂಗಳ 3ನೇ ಶನಿವಾರದಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗುತ್ತದೆ.
ದೊಡ್ಡಬಳ್ಳಾಪುರ ತಾಲೂಕಿನ ಹಿಂದುಳಿದ ಸಾಸಲು ಹೋಬಳಿಯ ಹೊಸಹಳ್ಳಿ ಗ್ರಾಮದಲ್ಲಿ ಇದೇ ಫೆಬ್ರವರಿ 20ರ ಶನಿವಾರದಂದು ಜಿಲ್ಲಾ ಉಸ್ತುವಾರಿ ಮತ್ತು ಕಂದಾಯ ಸಚಿವ ಆರ್. ಅಶೋಕ್ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ. ಸಚಿವರ ಜೊತೆ ರಾಜ್ಯ ಮಟ್ಟದ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸಹ ವಾಸ್ತವ್ಯ ಮಾಡಲಿದ್ದಾರೆ.