ದೊಡ್ಡಬಳ್ಳಾಪುರ: ಲಾಕ್ಡೌನ್ ಹಿನ್ನೆಲೆ ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಸಿಗದೆ ರೈತರು ತಮ್ಮ ಕೃಷಿ ಉತ್ಪನ್ನಗಳನ್ನ ರಸ್ತೆಗೆ ಸುರಿಯುತ್ತಿದ್ದಾರೆ. ಈ ಹಿನ್ನೆಲೆ ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಮುಂದಾಗಿರುವ ಕಂದಾಯ ಸಚಿವ ಆರ್.ಅಶೋಕ್ ತಮ್ಮ ಪದ್ಮನಾಭನಗರ ಕ್ಷೇತ್ರದಲ್ಲಿ ರೈತರು ಮತ್ತು ತಳ್ಳುವ ಗಾಡಿಯವರೊಂದಿಗೆ ನೇರ ವ್ಯಾಪಾರ ಮಾಡುವ ವ್ಯವಸ್ಥೆ ಮಾಡಿಕೊಡಲು ಮುಂದಾಗಿದ್ದಾರೆ. ಸಚಿವರ ಕಾರ್ಯಕ್ಕೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಸಹ ಸಾಥ್ ನೀಡಿದ್ದಾರೆ.
ರೈತರು-ತಳ್ಳುವ ಗಾಡಿಯವರೊಂದಿಗೆ ನೇರ ವ್ಯಾಪಾರದ ಪ್ರಯೋಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರೊಂದಿಗೆ ಚರ್ಚಿಸಲು ಕಂದಾಯ ಸಚಿವ ಆರ್.ಅಶೋಕ್ ಇಂದು ದೊಡ್ಡಬಳ್ಳಾಪುರ ನಗರದ ಎಪಿಎಂಸಿಗೆ ಭೇಟಿ ನೀಡಿ, ರೈತರು ಮತ್ತು ರೈತ ಮುಖಂಡರೊಂದಿಗೆ ಸಂವಾದ ನಡೆಸಿದರು. ನಂತರ ತರಕಾರಿ, ಹೂ, ಹಣ್ಣು ಬೆಳೆಯುವ ರೈತರ ಕಷ್ಟಗಳನ್ನ ಅಲಿಸಿದ ಸಚಿವರು, ಬೆಂಗಳೂರು ನಗರದಲ್ಲಿ ಮಧ್ಯವರ್ತಿಗಳ ಕಾಟವಿಲ್ಲದೆ ರೈತರ ಉತ್ಪನ್ನಗಳನ್ನ ಮಾರಾಟ ಮಾಡಲು ಅವಕಾಶ ನೀಡಿದ್ಧು, ಇದಕ್ಕಾಗಿ ಬೆಂಗಳೂರು ನಗರದಲ್ಲಿ ತಳ್ಳುವ ಗಾಡಿಗಳ ಮ್ಯಾಪಿಂಗ್ ಮಾಡಲಾಗಿದೆ ಎಂದರು.
ಜಿ.ಪಿ.ಎಸ್ ಮೂಲಕ ಮ್ಯಾಪಿಂಗ್ ಮಾಡಿದ್ದು, ಎಲ್ಲಾ ತರಕಾರಿ, ಹೂ, ಹಣ್ಣಿನ ಮಾರಾಟಗಾರರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ರೈತರು ತಳ್ಳುವ ಗಾಡಿಯವರೊಂದಿಗೆ ನೇರ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರಯೋಗಿಕವಾಗಿ ಪದ್ಮನಾಭನಗರದಲ್ಲಿನ ಮೈದಾನದಲ್ಲಿ ಜಾರಿ ಮಾಡಲಾಗುತ್ತಿದೆ. ಮುಂಜಾನೆ 4 ಗಂಟೆಗೆ ರೈತರು ತಮ್ಮ ಉತ್ಪನ್ನಗಳನ್ನ ನಿಗದಿಪಡಿಸಿದ ಮೈದಾನಕ್ಕೆ ತಂದು ತಳ್ಳುವ ಗಾಡಿ ವ್ಯಾಪಾರಿಗಳಿಗೆ ಮಾರಬಹುದು. ಮಧ್ಯವರ್ತಿಗಳ ನೆರವಿಲ್ಲದೆ ರೈತರು ತಮ್ಮ ಬೆಳೆಗಳ ಬೆಲೆಯನ್ನು ನಿಗದಿತ ಬೆಲೆಗೆ ಮಾರಾಟ ಮಾಡಬಹುದು ಎಂದು ತಿಳಿಸಿದ್ದಾರೆ.
ಮುಂದೆ ಬೆಂಗಳೂರಿನ ಎಲ್ಲಾ ಕ್ಷೇತ್ರಗಳಲ್ಲಿ ಈ ರೀತಿ ತಳ್ಳುವ ಗಾಡಿಯಲ್ಲಿ ತರಕಾರಿ ಮಾರಾಟಕ್ಕೆ ಅನುಮತಿ ನೀಡಲಿದ್ದೇವೆ. ಅದಕ್ಕಾಗಿ ಅಧಿಕಾರಿಗಳ ತಂಡ ಕೆಲಸ ಮಾಡುತ್ತಿದೆ. ಈಗಾಗಲೇ ಬೆಂಗಳೂರಿನ ಹಲವು ಮೈದಾನಗಳಲ್ಲಿ ತರಕಾರಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 3-4 ಗಂಟೆಯಿಂದ 6 ಗಂಟೆ ಒಳಗೆ ಮಾರಾಟಕ್ಕೆ ವ್ಯವಸ್ಥೆ ಮಾಡಿ, ದಲ್ಲಾಳಿಗಳ ಮದ್ಯಸ್ತಿಕೆ ಇಲ್ಲದೆ ನೇರ ಮಾರುಕಟ್ಟೆಗೆ ಅನುಮತಿ ನೀಡಿದ್ದೇವೆ ಎಂದು ಹೇಳಿದರು.