ಯಲಹಂಕ: ಸ್ನಾನ ಮಾಡಿದ ನೀರು ಮನೆ ಮುಂದೆ ನಿಂತು ಗಲೀಜಾಗಿತ್ತು. ಇದೇ ವಿಚಾರಕ್ಕೆ ಗ್ರಾಮ ಪಂಚಾಯತ್ ಸದಸ್ಯ ಮತ್ತು ಶಾಸಕರೊಬ್ಬರ ಗನ್ ಮ್ಯಾನ್ ನಡುವೆ ಜಗಳವಾಗಿ, ಗನ್ ಮ್ಯಾನ್ ಪಂಚಾಯತ್ ಸದಸ್ಯನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಹಲ್ಲೆಗೆ ಸಂಬಂಧಿಸಿದಂತೆ ಪಂಚಾಯತ್ ಸದಸ್ಯರು ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಯಲಹಂಕ ತಾಲೂಕಿನ ಸಿಂಗನಾಯನಹಳ್ಳಿಯಲ್ಲಿ ಇಂದು ಬೆಳಗ್ಗೆ 11:30 ರ ಸಮಯದಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ ಹಲ್ಲೆಗೊಳಗಾದ ಗ್ರಾಮ ಪಂಚಾಯತ್ ಸದಸ್ಯ ಬಾಬು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಘಟನೆ ವಿವರ: ಶಾಸಕರೊಬ್ಬರ ಗನ್ ಮ್ಯಾನ್ ಎಂದು ಹೇಳಲಾಗಿರುವ ಶ್ರೀನಿವಾಸ್ ಅವರು ಸಿಂಗನಾಯಕನಹಳ್ಳಿಯಲ್ಲಿ ಮನೆಯನ್ನ ಕಟ್ಟುತ್ತಿದ್ದರು. ಇವರ ಮನೆಯ ಪಕ್ಕದಲ್ಲಿ ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯತ್ ಸದಸ್ಯ ಬಾಬು ಅವರ ಮನೆ ಇದೆ. ಕಟ್ಟಡ ನಿರ್ಮಾಣದ ವೇಳೆ ಮತ್ತು ಸ್ನಾನ ಮಾಡಿದ ನೀರು ಬಾಬು ಅವರ ಮನೆ ಮುಂದೆ ನಿಂತು ಗಲೀಜಾಗಿತ್ತು. ಹೀಗಾಗಿ, ಬಾಬು ಮನೆಯವರು ಗಲೀಜು ಮಾಡದಂತೆ ಸಾಕಷ್ಟು ಬಾರಿ ಶ್ರೀನಿವಾಸ್ಗೆ ಹೇಳಿದ್ದರಂತೆ.
ಇಂದು ಬೆಳಗ್ಗೆ ಇದೇ ವಿಚಾರಕ್ಕೆ ಶ್ರೀನಿವಾಸ್ ಮತ್ತು ಬಾಬು ಕುಟುಂಬದ ನಡುವೆ ಜಗಳವಾಗಿದೆ. ಜಗಳದಲ್ಲಿ ಶ್ರೀನಿವಾಸ್ ಕಬ್ಬಿಣದ ತುಂಡಿನಿಂದ ಬಾಬು ಅವರ ತಲೆಗೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಬಾಬು ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.