ದೊಡ್ಡಬಳ್ಳಾಪುರ: ನೋಟ್ ಬ್ಯಾನ್, ಜಿಎಸ್ಟಿ, ಕೊರೊನಾದಿಂದ ನೇಕಾರಿಕೆ ಉದ್ಯಮ ನೆಲಕಚ್ಚಿದೆ ಇದರ ಜೊತೆ ಬೆಲೆ ಏರಿಕೆ, ಡಿಸೇಲ್, ಗ್ಯಾಸ್ ಬೆಲೆಗಳು ದುಪ್ಪಟ್ಟವಾಗಿದ್ದು, ನೇಕಾರರ ಜೀವನ ಸಹ ಕಷ್ಟವಾಗಿದೆ. ಇದೀಗ ಸತತ ಮೂರು ತಿಂಗಳ ವಿದ್ಯುತ್ ಬಿಲ್ ಪಾವತಿಸದವರ ವಿದ್ಯುತ್ ಪರವಾನಗಿ ರದ್ದು ಮಾಡುವಂತೆ ಬೆಸ್ಕಾಂ ಹೊರಡಿಸಿರುವ ಆದೇಶ ನೇಕಾರರ ಬದುಕನ್ನ ಬರ್ಬಾದ್ ಮಾಡಲು ಹೊರಟಿದೆ ಎಂದು ನೇಕಾರರು ಆರೋಪಿಸಿದ್ದಾರೆ.
ದೊಡ್ಡಬಳ್ಳಾಪುರ ನಗರ ಬಹುತೇಕ ನೇಕಾರಿಕೆಯನ್ನ ಅವಲಂಬಿಸಿದೆ. ಸುಮಾರು 30 ಸಾವಿರಕ್ಕೂ ಹೆಚ್ಚು ವಿದ್ಯುತ್ ಚಾಲಿತ ಮಗ್ಗಗಳಿದ್ದು, 50 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ಈಗಾಗಲೇ ನೇಕಾರಿಕೆ ಉದ್ಯಮ ಆರ್ಥಿಕವಾಗಿ ಸೊರಗಿದೆ, ಇದೀಗ ಬೆಸ್ಕಾಂ ಹೊರಡಿಸಿರುವ ಆದೇಶ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸತತವಾಗಿ ಮೂರು ತಿಂಗಳು ವಿದ್ಯುತ್ ಬಿಲ್ ಪಾವತಿಸದವರ ಕಟ್ಟಡಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ ಜೊತೆಗೆ ವಿದ್ಯುತ್ ಮೀಟರ್‌ಗಳನ್ನೆ ಕಿತ್ತೊಯ್ಯುತ್ತಿದೆ. ಈ ಮೂಲಕ ಬೆಸ್ಕಾಂ ಶುಲ್ಕ ವಸೂಲಿಗೆ ಮುಂದಾಗಿದೆ.
ಯಾವುದೇ ನೋಟಿಸ್ ನೀಡದೆ ಬೆಸ್ಕಾಂ ಸಿಬ್ಬಂದಿ ಮೀಟರ್‌ಗಳನ್ನು ಕಿತ್ತುಕೊಂಡು ಹೋಗುತ್ತಿದ್ದಾರೆ. ಗ್ರಾಹಕರು ಮತ್ತೆ ವಿದ್ಯುತ್ ಸಂಪರ್ಕ ಪಡೆಯ ಬೇಕಾದರೆ ಹೊಸದಾಗಿ ಅರ್ಜಿ ಸಲ್ಲಿಸಬೇಕು ಮತ್ತು ಮುಂಗಡವಾಗಿ ಪರವಾನಗಿ ಹಣ ಸಹ ಕಟ್ಟ ಬೇಕಾಗಿದೆ ಎಂದು ನೇಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಆಗ್ರಹ:ಮಗ್ಗಗಳನ್ನೇ ನಂಬಿ ಜೀವನ ಮಾಡುವ ನೇಕಾರರಿಗೆ ಮಗ್ಗಗಳೇ ಜೀವನಾಧಾರವಾಗಿದೆ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ಮಗ್ಗಗಳು ಕೆಟ್ಟು ನಿಲ್ಲುತ್ತಿವೆ. ಟಿಸಿಗಳನ್ನು ಬದಲಿಸಿ ಎಂದು ಹೇಳಿದರೂ ಬೆಸ್ಕಾಂನವರು ಬದಲಿಸುವುದಿಲ್ಲ. ರೀಡಿಂಗ್ ಮೀಟರ್‌ಗಳನ್ನು ಅಳವಡಿಸಿ ದಶಕಗಳೇ ಆಗಿದೆ. ಸರಿಯಾಗಿ ರೀಡಿಂಗ್ ಮೀಟರ್ ಕಾಣಿಸದೇ ಬೇಕಾಬಿಟ್ಟಿಯಾಗಿ ಬಿಲ್ ಹಾಕುತ್ತಿದ್ದಾರೆ. ಹೊಸ ಟಿಸಿ, ರೀಡಿಂಗ್ ಮೀಟರ್‌ಗಳನ್ನು ಅಳವಡಿಸುವಂತೆ ಮನವಿ ಮಾಡಿದರೂ ಬೆಸ್ಕಾಂ ಸ್ಪಂದಿಸುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ನೇಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.