ದೊಡ್ಡಬಳ್ಳಾಪುರ: ಡೀಸೆಲ್, ಪೆಟ್ರೋಲ್, ಗ್ಯಾಸ್ ಬೆಲೆ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರಜಾ ವಿಮೋಚನಾ ಚಳುವಳಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ
ದೇಶದಲ್ಲಿ ಪ್ರತಿನಿತ್ಯ ಡೀಸೆಲ್, ಪೆಟ್ರೋಲ್, ಗ್ಯಾಸ್ ಬೆಲೆ ಏರಿಕೆಯಾಗುತ್ತಿದ್ದು, ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಬೆಲೆ ಏರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಪ್ರಜಾ ವಿಮೋಚನಾ ಚಳುವಳಿ ಕಾರ್ಯಕರ್ತರು, ಬೆಲೆ ಏರಿಕೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದರು.
ದೊಡ್ಡಬಳ್ಳಾಪುರ ನಗರದ ತಾಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪ್ರಜಾ ವಿಮೋಚನಾ ಚಳುವಳಿ ಕಾರ್ಯಕರ್ತರು, ಡೀಸೆಲ್, ಪೆಟ್ರೋಲ್ ಬೆಲೆ ಏರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು. ಕೊರೊನಾ ಹೆಸರಿನಲ್ಲಿ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದು, ಈ ಪ್ಯಾಕೇಜ್ ನಷ್ಟವನ್ನು ತುಂಬಿಸಿಕೊಳ್ಳಲು ಡೀಸೆಲ್, ಪೆಟ್ರೋಲ್ ಮತ್ತು ಗ್ಯಾಸ್ ಬೆಲೆಯನ್ನು ಪ್ರತಿನಿತ್ಯ ಏರಿಸುತ್ತಿದೆ. ಪೆಟ್ರೋಲ್ ಉತ್ಪನ್ನಗಳ ಮೇಲೆ ಗರಿಷ್ಠ ತೆರಿಗೆ ಹಾಕುವ ಮೂಲಕ ಕೇಂದ್ರ ಸರ್ಕಾರ ಬಡವರು, ಮಧ್ಯಮ ವರ್ಗದವರ ಮೇಲೆ ಹೊರೆ ಹಾಕಿದೆ ಎಂದು ತಮ್ಮ ಅಸಮಾಧಾನ ಹೊರ ಹಾಕಿದರು.
ಈಗಾಗಲೇ ಲಾಕ್ಡೌನ್ನಿಂದ ದೇಶದ ಆರ್ಥಿಕ ವ್ಯವಸ್ಥೆ ಕುಸಿದಿದೆ. ಆರ್ಥಿಕ ದುಸ್ಥಿತಿಯಿಂದ ಜನಸಾಮಾನ್ಯರು ನರಳುತ್ತಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ ಈ ಕೂಡಲೇ ಪೆಟ್ರೋಲ್ ಉತ್ಪನ್ನಗಳ ಬೆಲೆ ಏರಿಕೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದರು.