ದೊಡ್ಡಬಳ್ಳಾಪುರ: 28 ವರ್ಷಗಳಿಂದ ವಸತಿಗಾಗಿ ಹೋರಾಟ ಮಾಡುತ್ತಿರುವ ತಾಲೂಕಿನ ಕಕ್ಕೇಹಳ್ಳಿ ಗ್ರಾಮಸ್ಥರು ಇಂದು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸುವ ಮೂಲಕ ಕೊಡಲೇ ನಿವೇಶನ ಕೊಡುವಂತೆ ಆಗ್ರಹಿಸಿದ್ದಾರೆ.
ವಸತಿ ಕಲ್ಪಿಸಿಕೊಡುವಂತೆ ಒತ್ತಾಯಿಸಿ ಪ್ರಜಾ ವಿಮೋಚನಾ ಚಳುವಳಿಯಿಂದ ಪ್ರತಿಭಟನೆ ತಾಲೂಕಿನ ಕಕ್ಕೇಹಳ್ಳಿ ಗ್ರಾಮದ 40 ಕುಟುಂಬಗಳು ಕಳೆದ 28 ವರ್ಷಗಳಿಂದ ನಿವೇಶನಕ್ಕಾಗಿ ಹೋರಾಟ ಮಾಡುತ್ತಿವೆ. ಆದರೆ ಇಲ್ಲಿಯವರೆಗೂ ಹಕ್ಕುಪತ್ರ ಖಾತಾ ದಾಖಲೆಗಳನ್ನು ಕೊಡದ ಕಾರಣ ಗ್ರಾಮಸ್ಥರ ಪರವಾಗಿ ಪ್ರಜಾ ವಿಮೋಚನಾ ಚಳುವಳಿ ಸಂಘಟನೆ ಪ್ರತಿಭಟನೆ ಅಯೋಜಿಸಿತ್ತು. ತಾಲೂಕು ಕಚೇರಿ ಮುಂದೆ ತಮಟೆ ಹೊಡೆಯುವ ಮೂಲಕ ನಿವೇಶನ ಕೊಡುವಂತೆ ಒತ್ತಾಯಿಸಿದರು.
ಇದರೊಂದಿಗೆ ತೂಬಗೆರೆ ಹೋಬಳಿಯ ಚೊಕ್ಕನಹಳ್ಳಿ ಗ್ರಾಮದ ಸರ್ವೆ ನಂಬರ್ 18, 19ರಲ್ಲಿರುವ 4 ಎಕರೆ ಜಮೀನಿನಲ್ಲಿ ನೆಲ್ಲುಕುಂಟೆ ಗ್ರಾಮದ ಬಡವರಿಗೆ ನಿವೇಶನ ಕೊಡಬೇಕು. ಸಾಸಲು ಹೋಬಳಿಯ ಕನಕೇನಹಳ್ಳಿ ಗ್ರಾಮದ ಸರ್ವೆ ನಂಬರ್ 58ರಲ್ಲಿರುವ 3 ಎಕರೆ 20 ಗುಂಟೆ ಜಮೀನಿನಲ್ಲಿ ಬಡವರಿಗೆ ನಿವೇಶನ ಕೊಡಬೇಕು. ಹೀಗೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪ ವಿಭಾಗಧಿಕಾರಿ ಡಾ. ಹರೀಶ್ ನಾಯಕ್, ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಹತ್ತು ದಿನಗಳಲ್ಲಿ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದರು. ಅಧಿಕಾರಿಗಳು ಮತ್ತು ಮುಖಂಡರೊಂದಿಗೆ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ನೀಡುವುದಾಗಿ ತಿಳಿಸಿದರು.