ದೊಡ್ಡಬಳ್ಳಾಪುರ: ಮಂಗಳೂರಿನ ಯುವ ವಕೀಲ ಕುಲದೀಪ್ ಶೆಟ್ಟಿ ಅವರ ಮೇಲೆ ಪುಂಜಾಲಕಟ್ಟೆ ಪೊಲೀಸರು ನಡೆಸಿದ್ದಾರೆ ಎನ್ನಲಾದ ದೌರ್ಜನ್ಯ ಖಂಡಿಸಿ ತಾಲೂಕಿನ ವಕೀಲರ ಸಂಘದಿಂದ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಯಿತು.
ವಕೀಲರ ಸಂಘದ ಅಧ್ಯಕ್ಷ ಹೆಚ್.ಎಂ ಮಂಜುನಾಥ್ ಮಾತನಾಡಿ, ಡಿಸೆಂಬರ್ 3 ರಂದು ಮಂಗಳೂರಿನ ಯುವ ವಕೀಲರಾದ ಕುಲದೀಪ್ ಶೆಟ್ಟಿ ಅವರ ಮೇಲೆ ಬಂಟ್ವಾಳದ ಪುಂಜಾಲಕಟ್ಟೆ ಠಾಣೆಯ ಪೊಲೀಸರು ನಡೆಸಿದ ಅಮಾನವೀಯ ದೌರ್ಜನ್ಯವನ್ನು ತಾಲೂಕು ವಕೀಲರ ಸಂಘ ತೀವ್ರವಾಗಿ ಖಂಡಿಸುತ್ತದೆ.
ವಕೀಲ ಕುಲದೀಪ್ ಮೇಲೆ ಪೊಲೀಸ್ ದೌರ್ಜನ್ಯ; ಕಲಾಪ ಬಹಿಷ್ಕರಿಸಿ ವಕೀಲರಿಂದ ಪ್ರತಿಭಟನೆ ಸುಳ್ಳು ದೂರಿನ ಆಧಾರದಲ್ಲಿ ಕುಲದೀಪ್ ಶೆಟ್ಟಿ ಮೇಲೆ ಎಫ್ ಐ ಆರ್ ದಾಖಲಿಸಿ ರಾತ್ರಿ ವೇಳೆ ಅಕ್ರಮವಾಗಿ ವಕೀಲರ ಮನೆ ಪ್ರವೇಶ ಮಾಡಿ ದೌರ್ಜನ್ಯದಿಂದ ವಕೀಲರನ್ನು ಎಳೆದುಕೊಂಡು ಹೋಗಿ ದಿನಪೂರ್ತಿ ಠಾಣೆಯಲ್ಲಿ ಕೂರಿಸಿಕೊಂಡ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಈ ಕೂಡಲೇ ಘಟನೆಗೆ ಕಾರಣರಾದ ಪೊಲೀಸರನ್ನು ಅಮಾನತು ಮಾಡಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ ಅವರು ಸರ್ಕಾರ ತ್ವರಿತವಾಗಿ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಎ.ಕೃಷ್ಣಮೂರ್ತಿ, ಖಜಾಂಚಿ ಆರ್.ರವಿ, ನಿರ್ದೇಶಕರಾದ ಆರ್.ಪ್ರಭಾಕರ, ಎನ್.ನರಸಿಂಹಮೂರ್ತಿ, ಶ್ರೀನಿವಾಸ್, ಶಾಂತಲ, ಹರೀಶ್, ವಸುಧಾ ಮತ್ತು ಸುರೇಶ್ ಕುಮಾರ್ ಸೇರಿದಂತೆ ಹಲವು ವಕೀಲರು ಭಾಗಿಯಾಗಿದ್ದರು.
ಇದನ್ನೂ ಓದಿ:ಮೆಟ್ರೋ ಯೋಜನೆ: ಮರಗಳನ್ನು ಕಡಿಯಲು ಹೈಕೋರ್ಟ್ ಅನುಮತಿ