ಹೊಸಕೋಟೆ:ತಾಲೂಕಿನ ಮುತ್ತಂದ್ರ ಗ್ರಾಮದಲ್ಲಿ ಖಾಸಗಿ ಬೋರ್‌ವೆಲ್ ಮಾಲೀಕರ ಹಾಗೂ ಗ್ರಾಮಸ್ಥರ ನಡುವೆ ಉಂಟಾಗಿದ್ದ ಸಮಸ್ಯೆ ಬಗೆಹರಿಸುವ ವಿಚಾರವಾಗಿ, ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ರವೀಂದ್ರ ಅವರ ಕಾರಿಗೆ ಮುತ್ತಿಗೆ ಹಾಕಿದ ಘಟನೆ ಜರುಗಿತು.
ಜಿಲ್ಲಾಧಿಕಾರಿ ಕಾರು ಅಡ್ಡಗಟ್ಟಿ ಗ್ರಾಮಸ್ಥರ ಆಕ್ರೋಶ - ನೀರಿಗಾಗಿ ಪ್ರತಿಭಟನೆ
ಕಳೆದ 30 ವರ್ಷಗಳಿಂದ 300 ಅಡಿಗಳಲ್ಲಿಯೇ ನೀರು ಲಭ್ಯವಾಗುತ್ತಿದ್ದ ಪ್ರದೇಶದಲ್ಲಿ ಕೆಲ ಪ್ರಭಾವಿ ವ್ಯಕ್ತಿಗಳು ತಮ್ಮ ಸ್ವಂತ ಜಮೀನಿನಲ್ಲಿ ಬೋರ್‌ವೆಲ್ ಕೊರೆಯಿಸಿ ನೀರು ಮಾರಾಟಕ್ಕೆ ಮುಂದಾಗಿದ್ದರು. ಪರಿಣಾಮ, ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗಿ ಸಮಸ್ಯೆ ಉಲ್ಬಣವಾಗಿದೆ ಎಂದು ಹೊಸಕೋಟೆಯ ಗ್ರಾಮವೊಂದರಲ್ಲಿ ಆರೋಪ ಕೇಳಿ ಬಂದಿದೆ.
ಮುತ್ತಂದ್ರ ಗ್ರಾಮದಲ್ಲಿ ಗ್ರಾ.ಪಂ. ವತಿಯಿಂದ ಕೊರೆಯಿಸಲಾದ 5 ಕೊಳವೆ ಬಾವಿಯ ಪೈಕಿ ಮೂರು ಕೊಳವೆ ಬಾವಿ ಬತ್ತಿ ಹೋಗಿದ್ದು, ಉಳಿದೆರಡರಲ್ಲಿ ನೀರು ಸಣ್ಣ ಪ್ರಮಾಣದಲ್ಲಿ ಲಭ್ಯವಾಗುತ್ತಿತ್ತು. ಸುಮಾರು 30 ವರ್ಷಗಳಿಂದ ಗ್ರಾ.ಪಂ. ವ್ಯಾಪ್ತಿಯಲ್ಲಿ 300 ಅಡಿಗಳಿಗೆ ನೀರು ಲಭ್ಯವಾಗುತ್ತಿತ್ತು. ಆದರೆ, ಕೆಲ ಪ್ರಭಾವಿ ವ್ಯಕ್ತಿಗಳು ತಮ್ಮ ಸ್ವಂತ ಜಮೀನಿನಲ್ಲಿ ಬೋರ್‌ವೆಲ್ ಕೊರೆಯಿಸಿ ನೀರು ಮಾರಾಟಕ್ಕೆ ಮುಂದಾದ ಪರಿಣಾಮ, ನೀರು ಕಡಿಮೆಯಾಗಿ ಸಮಸ್ಯೆ ಉಲ್ಬಣವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಕೇವಲ ಒಂದು ಬೋರ್‌ವೆಲ್ ಕೊರೆಯಿಸಿ ವಿದ್ಯುತ್ ಸಂಪರ್ಕ ಪಡೆದಿರುವ ಮಾಲೀಕರು, ಸುಮಾರು 10ಕ್ಕೂ ಹೆಚ್ಚು ಕೊಳವೆಬಾವಿ ಕೊರೆಯಿಸಿದ್ದಾರೆ. ಅಲ್ಲದೇ ಅನಧಿಕೃತವಾಗಿ ಗ್ರಾಮಕ್ಕೆ ಕೂಗಳತೆ ದೂರದಲ್ಲಿರುವ ಬಿಬಿಎಂಪಿ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದ ವೈಟ್ ಫೀಲ್ಡ್, ದಪನತೂರು, ಮಥುರಾ ನಗರ , ವರ್ತೂರು ಭಾಗಗಳಿಗೆ 300 ಕ್ಕೂ ಅಧಿಕ ಲೋಡ್ ಟ್ಯಾಂಕರ್ ನೀರನ್ನು ಸರಬರಾಜು ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.