ಕರ್ನಾಟಕ

karnataka

ETV Bharat / state

ಬಿಬಿಎಂಪಿ ತ್ಯಾಜ್ಯ ಘಟಕ ಮುಚ್ಚುವಂತೆ ಒತ್ತಾಯಿಸಿ ಗ್ರಾಮಸ್ಥರ ಅನಿರ್ಧಿಷ್ಟಾವಧಿ ಧರಣಿ - MSGP Unit

ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಘಟಕವನ್ನು ದೊಡ್ಡಬಳ್ಳಾಪುರ ತಾಲೂಕಿನ ಚಿಗೇರಹಳ್ಳಿಯಲ್ಲಿ ಸ್ಥಾಪನೆ ಮಾಡಲಾಗಿದೆ. ಎಂಎಸ್​ಜಿಪಿ ಘಟಕ ಕಸ ಸಂಸ್ಕರಣೆಯನ್ನು ಮಾಡುತ್ತಿದೆ. ಆದರೆ, ವೈಜ್ಞಾನಿಕವಾಗಿ ಕಸ ಸಂಸ್ಕರಣೆ ಮಾಡದೆ ಸುತ್ತಮುತ್ತಲಿನ ಗಾಳಿ, ನೀರು ಮತ್ತು ಮಣ್ಣು ವಿಷವಾಗಿದೆ. ಇದರಿಂದ ಘಟಕದ ಸುತ್ತಮುತ್ತಲಿನ 30ಕ್ಕೂ ಹೆಚ್ಚು ಗ್ರಾಮಗಳ ಜನರ ಬದುಕು ನರಕವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Protest against waste disposal unit in Doddaballapura
ಬಿಬಿಎಂಪಿ ತ್ಯಾಜ್ಯ ಘಟಕ ಮುಚ್ಚುವಂತೆ ಪ್ರತಿಭಟನೆ

By

Published : Nov 26, 2021, 8:16 PM IST

ದೊಡ್ಡಬಳ್ಳಾಪುರ: ಬಿಬಿಎಂಪಿ ತ್ಯಾಜ್ಯ ಘಟಕವನ್ನು ಮುಚ್ಚುವಂತೆ ಒತ್ತಾಯಿಸಿ ತಾಲೂಕಿನ ಚಿಗೇರಹಳ್ಳಿ ಗ್ರಾಮಸ್ಥರು ಅನಿರ್ಧಿಷ್ಟಾವಧಿ ಧರಣಿ ಮುಂದುವರೆಸಿದ್ದಾರೆ.

ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಘಟಕವನ್ನು ದೊಡ್ಡಬಳ್ಳಾಪುರ ತಾಲೂಕಿನ ಚಿಗೇರಹಳ್ಳಿಯಲ್ಲಿ ಸ್ಥಾಪನೆ ಮಾಡಲಾಗಿದೆ. ಎಂಎಸ್​ಜಿಪಿ ಘಟಕ ಕಸ ಸಂಸ್ಕರಣೆಯನ್ನು ಮಾಡುತ್ತಿದೆ. ಆದರೆ, ವೈಜ್ಞಾನಿಕವಾಗಿ ಕಸ ಸಂಸ್ಕರಣೆ ಮಾಡದೆ ಸುತ್ತಮುತ್ತಲಿನ ಗಾಳಿ, ನೀರು ಮತ್ತು ಮಣ್ಣು ವಿಷವಾಗಿದೆ. ಇದರಿಂದ ಘಟಕದ ಸುತ್ತಮುತ್ತಲಿನ 30ಕ್ಕೂ ಹೆಚ್ಚು ಗ್ರಾಮಗಳ ಜನರ ಬದುಕು ನರಕವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಗ್ರಾಮಸ್ಥರ ಧರಣಿಯ ಬಗ್ಗೆ ಎಚ್ಚೆತ್ತ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ನೇತೃತ್ವದ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಜನರ ಸಮಸ್ಯೆ ಆಲಿಸಿದರು. ನಂತರ ಎಂಎಸ್ ಜಿಪಿ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸಮಯದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ ಪ್ರತಿಭಟನಾನಿರತ ಗ್ರಾಮಸ್ಥರು ಶಾಶ್ವತವಾಗಿ ಘಟಕ ಮುಚ್ಚಬೇಕು, ತ್ಯಾಜ್ಯ ಘಟಕದಿಂದ ತಣ್ಣೀರಹಳ್ಳಿಯ ಕುಂಟರಂಗಪ್ಪ ಅವರ 200 ಹುಣಸೆ ಮರ ಒಣಗಿಹೋಗಿದ್ದು, ಅವರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಎಂಎಸ್​ಜಿಪಿ ಘಟಕದ ಮಾಲೀಕ ಅಕ್ರಮವಾಗಿ 55 ಎಕರೆ ಗೋಮಾಳವನ್ನು ಒತ್ತುವರಿ ಮಾಡಿದ್ದು, ಅದನ್ನು ತೆರವು ಮಾಡಬೇಕು. ಬಯೋಕಾನ್ ಸಂಸ್ಥೆಯ ವಿಷಯುಕ್ತ ನೀರನ್ನು ಬೋರ್​ವೆಲ್​ಗೆ ಬಿಟ್ಟವರ ವಿರುದ್ಧ ಪ್ರಕರಣ ದಾಖಲು ಮಾಡಬೇಕು. ರೈತರು ತಮ್ಮ ಹೊಲಗಳಿಗೆ ಹೋಗದಂತೆ ಕಾಂಪೌಂಡ್ ನಿರ್ಮಾಣ ಮಾಡಿದ್ದು, ರೈತರಿಗೆ ತಮ್ಮ ಹೊಲಗಳಿಗೆ ಹೋಗಲು ದಾರಿ ಮಾಡಿ ಕೊಡಬೇಕು. ಬಿಬಿಎಂಪಿ ಕಳೆದ 5 ವರ್ಷದಿಂದ ಗ್ರಾಮಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 68 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಇದರ ಬಗ್ಗೆಯೂ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ಎಂಎಸ್​ಜಿಪಿ ಘಟಕದ ಮಾಲೀಕನನ್ನು ಕರೆಸಿ ಮಾತುಕತೆ ನಡೆಸಿದರು. ಜನರ ಬೇಡಿಕೆಗಳನ್ನು ಈಡೇರಿಸುವಂತೆ ಸೂಚನೆ ನೀಡಿದರು. ನಂತರ ಧರಣಿನಿರತರ ಬಳಿಗೆ ಬಂದ ಜಿಲ್ಲಾಧಿಕಾರಿಗಳು ನಿಮ್ಮ ಬೇಡಿಕೆ ಈಡೇರಿಸುವುದಾಗಿ ಆಶ್ವಾಸನೆ ನೀಡಿದರು. ಆದರೆ, ಎಂಎಸ್​ಜಿಪಿ ಘಟಕ ಶಾಶ್ವತವಾಗಿ ಬಾಗಿಲು ಹಾಕುವ ತನಕ ಧರಣಿಯಿಂದ ಹಿಂದೆ ಸರಿಯುವುದಿಲ್ಲವೆಂದು ಪ್ರತಿಭಟನಾನಿರತರು ಪಟ್ಟು ಹಿಡಿದರು.

ಇದನ್ನೂ ಓದಿ:ಬೆಂಗಳೂರಲ್ಲಿ ನಿಗೂಢ ಶಬ್ದವು ಭೂಕಂಪದ ಮುನ್ಸೂಚನೆಯಲ್ಲ, ಭಯಬೇಡ : ಸಚಿವ ಆರ್. ಅಶೋಕ್

ABOUT THE AUTHOR

...view details