ನೆಲಮಂಗಲ (ಬೆಂಗಳೂರು ಗ್ರಾಮಾಂತರ) : ಕಳೆದ 30 ವರ್ಷಗಳಿಂದ ಗ್ರಾಮದಲ್ಲಿದ್ದ ನ್ಯಾಯಬೆಲೆ ಅಂಗಡಿಯನ್ನು ಯಾವುದೇ ನೋಟಿಸ್ ನೀಡದೇ ಏಕಾಏಕಿ ಸ್ಥಳಾಂತರ ಮಾಡಿರುವುದನ್ನು ಖಂಡಿಸಿ ಬೈರನಾಯ್ಕನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಆಡಳಿತ ಪಕ್ಷದ ಪ್ರಭಾವದಿಂದ ಅಧಿಕಾರ ದುರುಪಯೋಗ ಮಾಡಿಕೊಂಡು ಬೈರನಾಯ್ಕನಹಳ್ಳಿ ಗ್ರಾಮದಲ್ಲಿದ್ದ ನ್ಯಾಯಬೆಲೆ ಅಂಗಡಿಯನ್ನು ಹಸಿರುವಳ್ಳಿಗೆ ಸ್ಥಳಾಂತರ ಮಾಡಿದ್ದಾರೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಬೈರನಾಯ್ಕನಹಳ್ಳಿ ಸೇರಿದಂತೆ ಹಸಿರುವಳ್ಳಿ, ಲಕ್ಕಪ್ಪನಹಳ್ಳಿ, ದೊಡ್ಡ ಹುಚ್ಚಯ್ಯನಪಾಳ್ಯ ಗ್ರಾಮದ 700ಕ್ಕೂ ಹೆಚ್ಚು ಪಡಿತರ ಚೀಟಿ ಹೊಂದಿದ್ದು, ಕಳೆದ 30 ವರ್ಷದಿಂದ ಭಾಗವಾಗಿರುವುದರಿಂದ ಬೈರನಾಯ್ಕನಹಳ್ಳಿಯಲ್ಲಿ ಪಡಿತರ ಅಕ್ಕಿಯನ್ನು ವಿತರಿಸಲಾಗುತ್ತಿತ್ತು. ಆದರೆ, ಕಳೆದ ಕೆಲ ತಿಂಗಳ ಹಿಂದೆ ಏಕಾಏಕಿ ಯಾವುದೇ ಸೂಚನೆ, ಆದೇಶ ನೀಡದೆ ನ್ಯಾಯ ಬೆಲೆ ಅಂಗಡಿಯನ್ನು ಹಸಿರುವಳ್ಳಿಯಲ್ಲಿ ನ್ಯಾಯಬೆಲೆ ಅಂಗಡಿಯನ್ನು ತೆರೆದಿದ್ದಾರೆ. ಹಸಿರುವಳ್ಳಿ ಗ್ರಾಮ ಇಲ್ಲಿಂದ 5 ಕಿಮೀ ದೂರ ವಿದ್ದು, ಸರಿಯಾ ಸಾರಿಗೆ ವ್ಯವಸ್ಥೆ ಇಲ್ಲ. ಈ ನಡುವೆ ಕೇವಲ ಮೂರು ಮಾತ್ರ ಪಡಿತರ ವಿತರಣೆ ಮಾಡುವುದು ಎನ್ನುತ್ತಾರೆ. ಇಂತಹ ಸಂದರ್ಭದಲ್ಲಿ ಹೇಗೆ ಅಕ್ಕಿ ತೆಗೆದುಕೊಂಡು ಬರುವುದು. ಯಾವುದೇ ರಾಜಕೀಯ ಲೇಪ ನ್ಯಾಯಬೆಲೆ ಅಂಗಡಿಗೆ ಬಳಿಯಬಾರದು. ಬೈರನಾಯ್ಕನಹಳ್ಳಿಯಲ್ಲಿ ನ್ಯಾಯಬೆಲೆ ಅಂಗಡಿ ಮುಂದುವರೆಯಲಿ ಎಂದು ಗ್ರಾ.ಪಂ ಸದಸ್ಯ ಸಿ.ರಾಜಣ್ಣ ಹೇಳಿದರು.