ಕರ್ನಾಟಕ

karnataka

ಕೃಷಿ ಕಾಯ್ದೆ ವಿರೋಧಿಸಿ ಎಲ್ಲೆಡೆ ಕಿಚ್ಚು: ನೇಗಿಲು ಹೊತ್ತ ವಾಟಾಳ್ ನಾಗರಾಜ್​​!

By

Published : Jan 26, 2021, 3:18 PM IST

ತಲೆಗೆ ಟವೆಲ್ ಹಾಗೂ ಪಂಚೆ ತೊಟ್ಟು ರೈತನಾಗಿ ವಾಟಾಳ್, ಕೃಷಿ ಮಸೂದೆಯನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು.

Protest against Agriculture Act
ವಾಟಾಳ್ ನಾಗರಾಜ್ ಪ್ರತಿಭಟನೆ

ಹೊಸಕೋಟೆ/ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ವಿರೋಧಿಸಿ ಎಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿವೆ. ನಗರದ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.‌

ತಲೆಗೆ ಟವೆಲ್ ಹಾಗೂ ಪಂಚೆ ತೊಟ್ಟು ರೈತನಾಗಿ ವಾಟಾಳ್, ಮಸೂದೆಯನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು. ಎತ್ತಿನಗಾಡಿಯ ಮೂಲಕ ನೇಗಿಲನ್ನು ಹೊತ್ತು ಕೆಂಪೇಗೌಡ ಬಸ್​ ನಿಲ್ದಾಣದ ಮೂಲಕ ಮೆರವಣಿಗೆ ಸಾಗಿದರು.

ಇನ್ನು ಹೊಸಕೋಟೆ ಟೋಲ್ ಮುಂಭಾಗ ರೈತರ ಟ್ರ್ಯಾಕ್ಟರ್ ರ್ಯಾಲಿಯನ್ನು ಬೆಂಬಲಿಸಿ ಸಿಐಟಿಯು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಷ್ಟ್ರಧ್ವಜ ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಾಟಾಳ್ ನಾಗರಾಜ್ ಪ್ರತಿಭಟನೆ

ಇನ್ನು ಟೋಲ್ ಎಂಟ್ರಿಗೂ ಮುನ್ನ ಬ್ಯಾರಿಕೇಡ್ ಹಾಕಿ ಪೊಲೀಸರು ವಾಹನಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ತೋಟಗಳಿಗೆ ಗೊಬ್ಬರ ತರಲು ಬರುತ್ತಿದ್ದ 6ಕ್ಕೂ ಹೆಚ್ಚು ಟ್ರ್ಯಾಕ್ಟರ್​​​ಗಳನ್ನು ಟೋಲ್​​ನಿಂದ ನಗರದ ಕಡೆ ಪೊಲೀಸ​ರು ಬಿಡಲಿಲ್ಲ. ಯಾವುದೇ ಟ್ರ್ಯಾಕ್ಟರ್ ಎಂಟ್ರಿಯಾಗುವ ಮುನ್ನವೇ ತಡೆಯುತ್ತಿದ್ದಾರೆ.

ಸದ್ಯ 11 ಟ್ರ್ಯಾಕ್ಟರ್​​ಗಳಿಗೆ ಮಾತ್ರ ಅನುಮತಿ ನೀಡಿದ್ದು, ಈಗ ಬೆಂಗಳೂರು ಕಡೆ ಏಳು ಟ್ರ್ಯಾಕ್ಟರ್​​​ಗಳು ಹೊಸಕೋಟೆ ಟೋಲ್​​ನಿಂದ ಫ್ರೀಡಂ ಪಾರ್ಕ್ ಕಡೆ ಹೊರಟಿವೆ. ಕೋಲಾರದಿಂದ ನೂರಾರು ರೈತರು ಮತ್ತು ಸಂಘಟನೆಗಳು ಬೆಂಗಳೂರಿನತ್ತ ಪ್ರಯಾಣ ಬೆಳೆಸಿವೆ.

ಇನ್ನು ಹೊಸಕೋಟೆ ಟೋಲ್ ಬಳಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪೊಲೀಸ​​ರಿಂದ ಬಂದೋಬಸ್ತ್ ಮಾಡಲಾಗಿದೆ. 65 ಮಂದಿ ಬೆಂಗಳೂರು ನಗರ ಪೊಲೀಸ​​ರು, 70 ಮಂದಿ ಗ್ರಾಮಾಂತರ ಜಿಲ್ಲೆ ಪೊಲೀಸ​​​ರು ಹಾಗೂ ಎರಡು ಕೆಎಸ್ಆರ್​​ಪಿ ತುಕಡಿ ನಿಯೋಜನೆ ಮಾಡಲಾಗಿದೆ.

ಇನ್ನು ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ರೈತರ ಜೊತೆ ಸೌಜನ್ಯದಿಂದ ವರ್ತಿಸುವಂತೆ ಸಿಬ್ಬಂದಿಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ABOUT THE AUTHOR

...view details