ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪಟ್ಟಣ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ನಿಷೇಧಾಜ್ಞೆ ಜಾರಿಮಾಡಲಾಗಿದೆ.
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಿಆರ್ಪಿಸಿ 1973ರ ಕಲಂ 144(3)ರ ಮೇರೆಗೆ ಜೂನ್ 30ರಿಂದ ಮುಂದಿನ ಆದೇಶದವರೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ಹೊಸಕೋಟೆ ಪಟ್ಟಣ ವ್ಯಾಪ್ತಿಯಲ್ಲಿ ಸಂತೆ, ಜಾತ್ರೆ, ಮೆರವಣಿಗೆ, ಸಮಾವೇಶ, ಸಮ್ಮೇಳನ, ಕ್ರೀಡಾಕೂಟ ಹಾಗೂ ಇತರೆ ಯಾವುದೇ ಧಾರ್ಮಿಕ ಸಮಾರಂಭ, ಹೆಚ್ಚು ಜನ ಗುಂಪು ಸೇರುವುದು ನಿಷೇಧವಾಗಿದೆ. ಬೇಸಿಗೆ ಶಿಬಿರ, ಪ್ರವಾಸ, ಸ್ನೇಹ ಸಮ್ಮೇಳನ, ಸಂಗೀತ ಸಮ್ಮೇಳನ, ನಾಟಕೋತ್ಸವ, ವಿಚಾರ ಗೋಷ್ಠಿ ಸೇರಿದಂತೆ ಇತರೆ ಕಾರ್ಯಕ್ರಮ ನಡೆಸುವಂತಿಲ್ಲ.
ಪರೀಕ್ಷಾ ಕೇಂದ್ರಗಳು, ಶವ ಸಂಸ್ಕಾರ, ನಿತ್ಯ ಬಳಕೆ ಮಾಡುವಂತಹ ವಸ್ತುಗಳು ಹಾಗೂ ತರಕಾರಿ ಮಾರುಕಟ್ಟೆಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ. ಆದರೆ, ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಹಾಗೂ ಸ್ಯಾನಿಟೈಜರ್ ಬಳಸುವುದು ಕಡ್ಡಾಯಗೊಳಿಸಲಾಗಿದೆ.
ಈ ಆದೇಶ ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 188ರ ಪ್ರಕಾರ ಕಾನೂನು ಕ್ರಮವನ್ನು ಜರುಗಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಪಿ.ಎನ್.ರವೀಂದ್ರ ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.