ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಕನ್ನಡ ನಾಮಫಲಕಕ್ಕಾಗಿ ಹೋರಾಟ ನಡೆಸಿ ನ್ಯಾಯಾಂಗ ಬಂಧನದಲ್ಲಿದ್ದ ನಾರಾಯಣ ಗೌಡ ಅವರನ್ನು ಜಾಮೀನು ಮೇಲೆ ಬಿಡುಗಡೆ ಮಾಡಲು ದೇವನಹಳ್ಳಿಯ 5ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆದೇಶ ನೀಡಿದೆ. ನಾರಾಯಣ ಗೌಡ ಅವರ ಜೊತೆಗೆ ಬಂಧಿಸಿದ್ದ 29 ಕನ್ನಡಪರ ಹೋರಾಟಗಾರರ ಬಿಡುಗಡೆಗೂ ಕೋರ್ಟ್ ಆದೇಶಿಸಿದೆ.
ವಾಣಿಜ್ಯ ಮಳಿಗೆಗಳ ಮೇಲೆ ಕನ್ನಡ ನಾಮಫಲಕಕ್ಕೆ ಒತ್ತಾಯಿಸಿ ಕರವೇ ನಾರಾಯಣ ಗೌಡ ಅವರ ನೇತೃತ್ವದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಲಾಗಿತ್ತು. ಡಿ. 27 ರಂದು ದೇವನಹಳ್ಳಿಯ ಸಾದಹಳ್ಳಿ ಗೇಟ್ನಿಂದ ಕರವೇ ಕಾರ್ಯಕರ್ತರು ಪ್ರತಿಭಟನಾ ರ‍್ಯಾಲಿ ಅಯೋಜನೆ ಮಾಡಿದ್ದರು.
ಪ್ರತಿಭಟನೆ ವೇಳೆ ಕನ್ನಡಪರ ಕಾರ್ಯಕರ್ತರು ಬೃಹತ್ ಫ್ಲೆಕ್ಸ್ಗಳನ್ನು ಹರಿದು ಹಾಕಿದ್ದರು. ಬೋರ್ಡ್ಗಳನ್ನು ಒಡೆದು ಹಾಕಿದ್ದರು. ಸಾರ್ವಜನಿಕ ಅಸ್ತಿಪಾಸ್ತಿ ಹಾಳು ಮಾಡಿದ ಆರೋಪದ ಮೇಲೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಕರವೇ ನಾರಾಯಣ ಗೌಡ ಸೇರಿದಂತೆ 29 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಹೆದ್ದಾರಿ ತಡೆ, ಸಾರ್ವಜನಿಕ ಅಸ್ತಿ ಹಾನಿ ಮತ್ತು ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದಡಿ ಮೂರು ಪ್ರಕರಣಗಳು ದಾಖಲಾಗಿದ್ದವು.