ಹೊಸಕೋಟೆ (ಬೆ. ಗ್ರಾ)/ಬೆಳಗಾವಿ :ಪ್ರತ್ಯೇಕ ಕಡೆಗಳಲ್ಲಿ ವಿದ್ಯುತ್ ಕಂಬದ ಮೇಲೆ ಕೆಲಸ ಮಾಡುವಾಗ ಹೈ ವೋಲ್ಟೇಜ್ ವಿದ್ಯುತ್ ಪ್ರವಹಿಸಿ ಇಬ್ಬರು ಲೈನ್‌ಮ್ಯಾನ್‌ಗಳು ಸಾವನ್ನಪ್ಪಿದ್ದಾರೆ. ಮೃತರನ್ನು ಕೋಲಾರ ಜಿಲ್ಲೆಯವ ಅನಿಲ್ (35) ಮತ್ತು ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದ ಸಿದ್ದರಾಮ ಕುಪವಾಡೆ (38) ಎಂದು ಗುರುತಿಸಲಾಗಿದೆ.
ಪ್ರಕರಣ -1: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಮಾಲೂರು ರಸ್ತೆಯ ವಿಜಯನಗರ ಗೇಟ್ ಬಳಿ ಅನಿಲ್ ಕೆಲಸ ಮಾಡುವಾಗ ಘಟನೆ ನಡೆಯಿತು. ಬೆಸ್ಕಾಂನಲ್ಲಿ ಗುತ್ತಿಗೆ ಆಧಾರದಲ್ಲಿ ಅನಿಲ್ ಲೈನ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಇಂದು ಕೆಲಸಕ್ಕೆ ಹಾಜರಾಗಿದ್ದು, ಚೆನ್ನೈ ಸೂಪರ್ ಎಕ್ಸ್‌ಪ್ರೆಸ್ ಕಾಮಗಾರಿ ಹಿನ್ನೆಲೆಯಲ್ಲಿ ವಿದ್ಯುತ್ ಕಂಬ ಬದಲಿಸುವ ಕೆಲಸ ಮಾಡುತ್ತಿದ್ದರು. ಈ ವೇಳೆ ವಿದ್ಯುತ್ ಸಂಪರ್ಕ ಅಫ್ ಮಾಡಿದ ನಂತರ ಕಂಬದ ಮೇಲೆ ಹತ್ತಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಇದ್ದಕ್ಕಿದ್ದಂತೆ ಬೆಸ್ಕಾಂನವರು ವಿದ್ಯುತ್ ಸಂಪರ್ಕ ಆನ್ ಮಾಡಿದ್ದಾರೆ. ಅನಿಲ್ ವಿದ್ಯುತ್ ಸ್ಪರ್ಶದಿಂದ ಕಂಬದ ಮೇಲೆಯೇ ಸಾವನ್ನಪ್ಪಿದರು.
ಪ್ರಕರಣ-2: ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದ ಸಿದ್ದರಾಮ ಕುಪವಾಡೆ ಅವರು ಹೊಸಪೇಟೆ ಗಲ್ಲಿ ಹೊರವಲಯದ ಕೃಷಿ ಜಮೀನು ಬಳಿಯ ವಿದ್ಯುತ್ ಕಂಬ ಏರಿ ದುರಸ್ತಿ ಮಾಡುತ್ತಿದ್ದಾಗ ಹೈ ವೋಲ್ಟೇಜ್ ವಿದ್ಯುತ್ ಪ್ರವಹಿಸಿ ಅವಘಡ ಸಂಭವಿಸಿತು. ದುರಸ್ತಿ ಕಾರ್ಯಕ್ಕೆ ಬಂದಿದ್ದ ಮೂವರ ಪೈಕಿ ಸಿದ್ದರಾಮ ಕಂಬ ಏರಿದ್ದರು. ಸ್ಥಳಕ್ಕೆ ಚಿಕ್ಕೋಡಿ ಹೆಸ್ಕಾಂ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.