ನಟಿ ಪೂಜಾ ಗಾಂಧಿ ಪ್ರತಿಕ್ರಿಯೆ ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): "ಅನ್ಯ ರಾಜ್ಯದವರು ಕರ್ನಾಟಕಕ್ಕೆ ಬಂದ ಮೇಲೆ ಕನ್ನಡ ಮಾತನಾಡಲೇಬೇಕು" ಎಂದು ನಟಿ ಪೂಜಾ ಗಾಂಧಿ ಅಭಿಪ್ರಾಯಪಟ್ಟರು. ದೊಡ್ಡಬಳ್ಳಾಪುರದ ನಿವೇದಿತಾ ಶಾಲೆಯ 43ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನಾನು ಬೇರೆ ರಾಜ್ಯದಿಂದ ಬಂದಿದ್ದರೂ, ನನ್ನ ಕರ್ಮ ಭೂಮಿ ಕರ್ನಾಟಕ. ನಮ್ಮ ಭಾಷೆ, ಪರಂಪರೆ ಮತ್ತು ಸಂಸ್ಕೃತಿಗೆ 2 ಸಾವಿರ ವರ್ಷಗಳಿಗಿಂತ ಹೆಚ್ಚು ಇತಿಹಾಸವಿದೆ. ನೆಲ, ಜಲದ ಋಣ ತೀರಿಸಲು ಸಾಧ್ಯವಿಲ್ಲ" ಎಂದರು.
"ನನಗೆ ಈ ಭಾಷಯ ಮೇಲೆ ಗೌರವ, ಹೆಮ್ಮೆ ಇದೆ. ನಾನೂ ಕನ್ನಡತಿ ಎಂದು ಹೇಳುತ್ತೇನೆ. ನನಗೆ ಕನ್ನಡ ಓದಲು ಬರೆಯಲು ಬರುತ್ತದೆ. ಹೊರ ರಾಜ್ಯದವರು ಕರ್ನಾಟಕಕ್ಕೆ ಬಂದ ಮೇಲೆ ಕನ್ನಡವನ್ನು ಸ್ವಲ್ಪವಾದರೂ ಕಲಿಯಬೇಕು" ಎಂದಿರುವ ಅವರು, ಕನ್ನಡ ನಾಮಫಲಕ ಅಳವಡಿಸಬೇಕು ಎಂದು ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿ, "ನಾನು ಪ್ರತಿಭಟನೆಗೆ ಬೆಂಬಲ ಕೊಟ್ಟಿದ್ದೇನೆ. ಆದರೆ ಹಿಂಸಾತ್ಮಕವಾಗಿ ಏನೂ ಮಾಡಬಾರದು. ಕನ್ನಡ ನಾಮಫಲಕ ಅಳವಡಿಸಿ ಎಂದು ಪ್ರೀತಿಯಿಂದ ಹೇಳಬೇಕು. ಕಾನೂನಿನಲ್ಲಿ ಶೇ.60ರಷ್ಟು ಕನ್ನಡ ಬಳಸಬೇಕು ಎಂಬ ನಿಯಮವಿದೆ" ಎಂದು ತಿಳಿಸಿದರು.
ಇದನ್ನೂ ಓದಿ:ಕನ್ನಡ ನಾಮಫಲಕ ಕ್ರಾಂತಿ: ಬಾರುಕೋಲು ಹಿಡಿದು ಹುಬ್ಬಳ್ಳಿಯಲ್ಲಿ ಪ್ರತಿಭಟನೆ
ಕನ್ನಡ ಹೋರಾಟಗಾರರ ಬಂಧನ ಬೇಸರ ತರಿಸಿದೆ-ಬೊಮ್ಮಾಯಿ:ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಸೇರಿದಂತೆ ಕನ್ನಡ ಹೋರಾಟಗಾರರನ್ನು ಜೈಲಿಗೆ ಹಾಕಿರುವುದಕ್ಕೆ ದುಃಖವಾಗಿದೆ. ಸರ್ಕಾರ ಸರಿಯಾಗಿ ಕಾನೂನು ಅನುಷ್ಠಾನ ಮಾಡದಿರುವುದಕ್ಕೆ ಸಂಘಟನೆಗಳು ಹೋರಾಟದ ಹಾದಿ ಹಿಡಿಯಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ದೂರಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಇಂದು ಏರ್ಪಡಿಸಿದ್ದ ರಾಷ್ಟ್ರಕವಿ ಕುವೆಂಪು ಅವರ ನವೀಕೃತ ಸಭಾಂಗಣ ಹಾಗೂ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಾನು ಸಿಎಂ ಆಗಿದ್ದಾಗ ಸುಮಾರು ಎರಡು ಸಾವಿರ ಕನ್ನಡ ಹೋರಾಟಗಾರರ ಪ್ರಕರಣಗಳನ್ನು ವಾಪಸ್ ಪಡೆದಿದ್ದೆವು. ನಾಮಪಲಕಗಳಲ್ಲಿ ಕಡ್ಡಾಯ ಕನ್ನಡ ಅನುಷ್ಠಾನ ಮಾಡದಿರುವುದರಿಂದ ಈ ಪರಿಸ್ಥಿತಿ ಬಂದಿದೆ. ಆಡಳಿತಗಾರರಿಗೆ ಸೂಕ್ಷ್ಮತೆ ಇರಬೇಕು ಎಂದರು.
ನಾವು ಕನ್ನಡದ ಅನುಷ್ಠಾನ ಕಾನೂನು ಜಾರಿಗೊಳಿಸಿದ್ದೆವು. ಸ್ವಾತಂತ್ರ್ಯ ಬಂದು ಎಪ್ಪತೈದು ವರ್ಷಗಳಾಗಿದೆ. ಕನ್ನಡ ನಾಡಿನಲ್ಲಿ ಕನ್ನಡದ ಅನುಷ್ಠಾನಕ್ಕಾಗಿ ಕಾನೂನು ಮಾಡುವ ಅನಿವಾರ್ಯತೆ ಬಂದಿರುವುದು ಬೇಸರದ ಸಂಗತಿ. ಆದರೆ ಈಗ ಕಾನೂನು ಮಾಡದಿದ್ದರೆ ನಮ್ಮ ಮಕ್ಕಳಿಗೆ ಕಷ್ಟವಾಗಲಿದೆ. ಕಾನೂನು ಅನುಷ್ಠಾನ ಮಾಡದಿದ್ದರೆ ಅದು ದುರ್ದೈವ ಎಂದು ಬೊಮ್ಮಾಯಿ ಹೇಳಿದರು.