ದೊಡ್ಡಬಳ್ಳಾಪುರ: ಗುಂಡು ತೋಪಿನಲ್ಲಿ ಅಂದರ್ ಬಾಹರ್ ಇಸ್ಪೀಟ್ ಅಡ್ಡೆ ಮೇಲೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಮಿಂಚಿನ ದಾಳಿ ನಡೆಸುವ ಮೂಲಕ ಜೂಜಾಟದಲ್ಲಿ ತೊಡಗಿದ್ದ ಐವರು ಜೂಜುಕೋರರನ್ನು ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಮೆಳೇಕೋಟೆ ಕ್ರಾಸ್ ಬಳಿ ಸರ್ಕಾರಿ ಗುಂಡು ತೋಪಿನಲ್ಲಿ ಅಂದರ್ ಬಾಹರ್ ಇಸ್ಪೀಟ್ ಆಡುತ್ತಿದ್ದ ಸುಳಿವು ಸಿಕ್ಕಿತ್ತು. ಖಚಿತ ಸುಳಿವಿನ ಮೇಲೆ ದಾಳಿ ನಡೆಸಿದ ದೊಡ್ಡಬಳ್ಳಾಪುರ ಪೊಲೀಸರು ಜೂಜಾಟದಲ್ಲಿ ತೊಡಗಿದ್ದ ಐವರು ಜೂಜುಕೋರರನ್ನು ಬಂಧಿಸಿದ್ದಾರೆ. ನಾಲ್ವರು ಪರಾರಿಯಾಗಿದ್ದು, ದಾಳಿಯಲ್ಲಿ ಜೂಜಾಟಕ್ಕೆ ಪಣವಾಗಿಟ್ಟಿದ್ದ 1,250 ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.