ಆನೇಕಲ್:ಜಿಗಣಿಯ ಶ್ರೀರಾಮಪುರ ಮುಖ್ಯರಸ್ತೆಯಲ್ಲಿರುವ ಆ್ಯಕ್ಸಿಸ್ ಬ್ಯಾಂಕ್ ಎಟಿಎಂಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದ ಐವರ ತಂಡವೊಂದನ್ನು ಜಿಗಣಿ ಇನ್ಸ್ಪೆಕ್ಟರ್ ಸುದರ್ಶನ್ ತಂಡ ಸೆರೆಹಿಡಿದಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡೆ ತಿಳಿಸಿದ್ದಾರೆ. ಅಕ್ಟೋಬರ್ 22ರ ಮುಂಜಾನೆ ಸಮಯದಲ್ಲಿ ಗ್ಯಾಸ್ ಕಟರ್ ಉಪಯೋಗಿಸಿ ಎಟಿಎಂ ಯಂತ್ರ ಭೇದಿಸಲು ಕಳ್ಳರು ಯತ್ನಿಸಿದ್ದರು.
ನಾಳ್ವರು ಅಸ್ಸಾಂ ಮೂಲದವರಾಗಿದ್ದು, ಓರ್ವ ಯುವಕ ಪಶ್ಚಿಮ ಬಂಗಾಳದವನು ಎಂದು ತಿಳಿದುಬಂದಿದೆ. ಬಾಬುಲ್ ನೋನಿಯಾ, ಮಹ್ಮದ್ ಆಸೀಪ್ ಉದ್ದಿವ್, ಹಗೆ ಬಿಸ್ವಾಸ್, ದಿಲ್ವಾ ಹುಸೇನ್ ಅಸ್ಟರ್, ರೂಹುಲ್ ಅಮೀರ್ ಬಿನ್ ಶ್ಯಾಮ್ ಉದ್ದೀನ್ ಬಂಧಿತರು.
ಎಟಿಎಂ ಕಳ್ಳತನ ವಿಫಲ ಯತ್ನ: ಜಾಲ ಭೇದಿಸುವಲ್ಲಿ ಜಿಗಣಿ ಪೊಲೀಸರು ಯಶಸ್ವಿ ಬೊಮ್ಮಸಂದ್ರದಲ್ಲಿ ಗ್ಯಾಸ್ ಸಿಲೆಂಡರ್ ಖರೀದಿಸಿದ್ದ ಕಳ್ಳರು ಎಟಿಎಂ ಯಂತ್ರವನ್ನು ಗ್ಯಾಸ್ ಕಟರ್ ಮೂಲಕ ತೆರೆಯಲು ಯತ್ನಿಸಿದ್ದರು. ಆ ಸಮಯಕ್ಕೆ ಎಟಿಎಂನಲ್ಲಿ ಸೈರನ್ ಶಬ್ದವಾಗಿದ್ದು, ಐವರು ಆರೋಪಿಗಳು 2 ಗ್ಯಾಸ್ ಸಿಲಿಂಡರ್ ಕಟರ್ಗಳ ಬ್ಯಾಗ್ ಅಲ್ಲೇ ಬಿಟ್ಟು ಪರಾರಿಯಾಗಿದ್ದರು. ಮರುದಿನ ಕೇಂದ್ರ ಕಚೇರಿಯ ಸೆಕ್ಯೂರಿಟಿ ಮೇಲ್ವಿಚಾರಕನಿಂದ ದೂರು ಪಡೆದ ಪೊಲೀಸರ ತಂಡ ಆರೋಪಿಗಳ ಪತ್ತೆಗೆ ಇಳಿದಿತ್ತು.
ಜಿಗಣಿ ಶ್ರೀರಾಮಪುರ ವ್ಯಾಪ್ತಿಯಲ್ಲಿನ ಸುಮಾರು 250ಕ್ಕೂ ಹೆಚ್ಚು ಸಿಸಿ ಕ್ಯಾಮೆರಾದ ದೃಶ್ಯಗಳಲ್ಲಿ ಕಳ್ಳತನ ಸಮಯದಲ್ಲಿ ಓಡಾಡಿದ ಒಂದೇ ಆಟೋವನ್ನು ಪತ್ತೆ ಹಚ್ಚಿದ ಇನ್ಸ್ಪೆಕ್ಟರ್ ಆಟೋ ಚಾಲಕನನ್ನು ವಶಕ್ಕೆ ಪಡೆದಿದ್ದರು. ಆತನನ್ನು ವಿಚಾರಣೆ ನಡೆಸಿದಾಗ ನಡೆದ ಘಟನೆಯನ್ನು ವಿವರಿಸಿದ್ದಾನೆ. ಆರೋಪಿಗಳಲ್ಲಿ ಓರ್ವ ಅತ್ತಿಬೆಲೆಯ ಕಳ್ಳತನದಲ್ಲಿ ಆರೋಪಿಯಾಗಿರುವುದು ಬಿಟ್ಟರೆ ಉಳಿದ ನಾಲ್ವರು ಆರೋಪಿಗಳು ಮೊದಲ ಬಾರಿಗೆ ಕಳ್ಳತನದಲ್ಲಿ ಭಾಗಿಯಾದವರು ಎಂದು ಎಸ್ಪಿ ಹೇಳಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿ ಟ್ರ್ಯಾಕ್ಟರ್ ಕಳವು ಪ್ರಕರಣ: ಮೂವರು ಆರೋಪಿಗಳ ಬಂಧನ