ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ(KIAL) ಟರ್ಮಿನಲ್ -2ರ ಮೊದಲನೇ ಹಂತ ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಲೋಕಾರ್ಪಣೆಯಾಗಲಿದೆ. ಉದ್ಯಾನನಗರಿ ಬೆಂಗಳೂರಿಗೆ ತಕ್ಕಂತೆ ಟರ್ಮಿನಲ್-2 ರ ಒಳಾಂಗಣವನ್ನು ಹಚ್ಚ ಹಸಿರಿನ ಉದ್ಯಾನವನ ಪರಿಕಲ್ಪನೆಯಲ್ಲಿ ನಿರ್ಮಿಸಿದ್ದು, ವಿದೇಶಿ ವಿಮಾನ ನಿಲ್ದಾಣಗಳನ್ನು ಮೀರಿಸುವಂಥ ಹೈಟೆಕ್ ವ್ಯವಸ್ಥೆಯನ್ನು ಹೊಂದಿದೆ.
ದೇಶದ 3ನೇ ವಿಮಾನ ನಿಲ್ದಾಣ:ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅತಿವೇಗದಲ್ಲಿ ಬೆಳೆಯುತ್ತಿರುವ ದೇಶದ ಮೂರನೇ ವಿಮಾನ ನಿಲ್ದಾಣವಾಗಿದೆ. ಈಗಾಗಲೇ ದಿನ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದು, ಅದಕ್ಕೆ ತಕ್ಕಂತೆ ಪ್ರತಿ ವರ್ಷಕ್ಕೆ 2 ಕೋಟಿ ಪ್ರಯಾಣಿಕರು ಬಂದುಹೋಗುವ ಸಾಮರ್ಥ್ಯವನ್ನು ಹೊಂದಿದೆ. ಸದ್ಯ ಪ್ರಯಾಣಿಕರ ದಟ್ಟನೆ 1.6 ಕೋಟಿಗೆ ತಲುಪಿದೆ. ಆದರೆ ಪ್ರಸ್ತುತ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಆಗುತ್ತಿದ್ದು, ಇದರಿಂದ ಚೆಕ್ ಇನ್, ಇಮಿಗ್ರೇಷನ್, ಭದ್ರತಾ ತಪಾಸಣೆ, ಬ್ಯಾಗೇಜ್ ಪ್ರಕ್ರಿಯೆಗಳು ವಿಳಂಬವಾಗುತ್ತಿವೆ. ಹೀಗಾಗಿ ನಾಲ್ಕು ವರ್ಷದ ಹಿಂದೆಯೇ ಟರ್ಮಿನಲ್ -2 ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗಿತ್ತು.