ನೆಲಮಂಗಲ :ಹೆಂಡತಿಯ ಸಹೋದರಿ ಜೊತೆ ಗಂಡ ವಿವಾಹೇತರ ಸಂಬಂಧ ಹೊಂದಿದ್ದ ವಿಚಾರಕ್ಕೆ ಗಂಡ, ಹೆಂಡತಿ ನಡುವೆ ಜಗಳ ಆಗುತ್ತಿತ್ತು. ಆದರೆ, ಗಂಡನ ಬರ್ತ್ ಡೇ ಆಚರಿಸಿದ ಪೋಟೋ ಫೇಸ್ಬುಕ್ಗೆ ಅಪ್ಲೋಡ್ ಮಾಡಿರುವುದೇ ತನ್ನ ಸಾವಿಗೆ ಕಾರಣವಾಗುತ್ತೆ ಎಂದು ಪತ್ನಿಗೆ ತಿಳಿದಿರಲಿಲ್ಲ.
ನೆಲಮಂಗಲ ತಾಲೂಕಿನ ತೊಣನಚಿನಕುಪ್ಪೆ ಸಮೀಪ ಭುವನೇಶ್ವರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತನ್ನ ಸಹೋದರಿಯೊಂದಿಗೆ ಗಂಡನ ಅನೈತಿಕ ಸಂಬಂಧಕ್ಕೆ ಪತ್ನಿ ಶ್ವೇತಾ (30) ಬಲಿಯಾಗಿದ್ದಾಳೆ, ಹೆಂಡತಿಯ ಕತ್ತು ಹಿಸುಕಿ ಕೊಲೆಗೈದ ಚೌಡೇಶ್ (35) ಜೈಲು ಸೇರಿದ್ದಾನೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಶ್ವೇತಾ, ಹಿರಿಯೂರು ತಾಲೂಕಿನ ಕುರುಬರಹಳ್ಳಿಯ ಚೌಡೇಶ್ ನಡುವೆ 9 ವರ್ಷಗಳ ಹಿಂದೆ ಮದುವೆಯಾಗಿತ್ತು, ಇಬ್ಬರ ದಾಂಪತ್ಯಕ್ಕೆ ಇಬ್ಬರು ಗಂಡು ಮಕ್ಕಳಿದ್ದರು. 4 ವರ್ಷಗಳ ಹಿಂದೆ ಉದ್ಯೋಗ ಅರಸಿ ನೆಲಮಂಗಲಕ್ಕೆ ಬಂದಿದ್ದ ಆತ ಬಾರ್ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ. 3 ವರ್ಷಗಳ ನಿವೇಶನ ಖರೀದಿಸಿ ಮನೆಯನ್ನ ಕಟ್ಟಿಸಿ ಹೆಂಡತಿ ಜೊತೆ ಸುಖಿ ಸಂಸಾರ ನಡೆಸುತ್ತಿದ್ದ. ಆದರೆ ಅವನ ಕಣ್ಣು ಯಾವಾಗ ನಾದಿನಿ ಮೇಲೆ ಬಿತ್ತೋ, ಬಳಿಕ ಸಂಸಾರದಲ್ಲಿ ಬಿರುಕು ಮೂಡಿದೆ.
ಪ್ರವಾಸಿ ತಾಣಗಳ ಸುತ್ತಾಟ:ಎಲ್ಎಲ್ಬಿ ವ್ಯಾಸಂಗ ಮಾಡುತ್ತಿದ್ದ ನಾದಿನಿ ಜೊತೆ ಚೌಡೇಶ್ ನಂಟು ಬೆಸೆದು, ಇಬ್ಬರ ವಿವಾಹೇತರ ಸಂಬಂಧಕ್ಕೆ ಕಾರಣವಾಗಿತ್ತು. ಹೆಂಡತಿ ಬಳಿ ತನಗೆ ಟ್ರೈನಿಂಗ್ ಇದೆ, ಪರ ಊರಿನಲ್ಲಿ ಕೆಲಸ ಇದೆ ಎಂದೆಲ್ಲ ಸುಳ್ಳು ಹೇಳಿ ಚೌಡೇಶ್ ತನ್ನ ನಾದಿನಿ ಜೊತೆ ಪ್ರವಾಸಿ ಸ್ಥಳಗಳನ್ನು ಸುತ್ತಾಡುತ್ತಿದ್ದ. ಯಾರಿಗೂ ಗೊತ್ತಾಗದಂತೆ ನಾದಿನಿ ಹಾಗೂ ಬಾವ ಮದುವೆ ಕೂಡ ಆಗಿದ್ದರು. ಇದೇ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಜಗಳ ಆಗುತ್ತಿತ್ತು ಎಂದು ತಿಳಿದು ಬಂದಿದೆ.
ಕೋಪದಲ್ಲಿ ಕೊಲೆ:ಮೊನ್ನೆ ಚೌಡೇಶ್ ದೇವಸ್ಥಾನದಲ್ಲಿ ಹುಟ್ಟುಹಬ್ಬ ಆಚರಿಸಿದ ಶ್ವೇತಾ ಬರ್ತ್ಡೇ ಆಚರಿಸಿದ ಪೋಟೋವನ್ನು ಫೇಸ್ಬುಕ್ನಲ್ಲಿ ಹಾಕಿದ್ದಳು. ಈ ಫೋಟೋ ನೋಡಿದ ಆಕೆ ಸಹೋದರಿಯು ಚೌಡೇಶ್ ಜೊತೆ ಜಗಳವಾಡಿದ್ದಾಳೆ. ಇದೇ ಕೋಪದಲ್ಲಿ ಮನೆಗೆ ಬಂದ ಆರೋಪಿಯು ಶ್ವೇತಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಲೋ ಬಿಪಿಯಿಂದ ಹೆಂಡತಿ ಸತ್ತಳೆಂದು ಕಥೆ ಕಟ್ಟಿದ್ದಾನಂತೆ.
ಪೋಷಕರ ದೂರಿನಿಂದ ಪ್ರಕರಣ ಬಯಲಿಗೆ:ಹಿರಿಯೂರಿನಿಂದ ಬಂದ ಮೃತ ಶ್ವೇತಾಳ ಹೆತ್ತವರು ಶವದ ಕತ್ತಿನ ಭಾಗದಲ್ಲಿ ಗಾಯದ ಗುರುತು ಗಮನಿಸಿದ್ದಾರೆ. ಪೊಲೀಸರಿಗೆ ಈ ವಿಷಯ ತಿಳಿಸಿ ಶ್ವೇತಾಳ ಸಾವಿಗೆ ಚೌಡೇಶ್ ಕಾರಣ ಎಂದು ದೂರು ನೀಡಿದ್ದಾರೆ. ಆರೋಪಿ ಚೌಡೇಶ್ನನ್ನು ವಶಕ್ಕೆ ಪಡೆದ ನೆಲಮಂಗಲ ಗ್ರಾಮಾಂತರ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಆರೋಪಿ ಬಂಧಿಸಲಾಗಿದ್ದು, ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಬೆಂಗಳೂರಲ್ಲಿ ಭೀಕರ ಅಪಘಾತ.. ಬಸ್ಗೆ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರ ದುರ್ಮರಣ