ಬೆಂಗಳೂರು:ವಿದ್ಯುತ್ ಕಂಬಕ್ಕೆ ಕಟ್ಟಿದ್ದ ಕೇಬಲ್ ನೆಲಕ್ಕೆ ತಾಕಿದ್ದ ಪರಿಣಾಮ, ಪಾದಚಾರಿ ಅದನ್ನು ತುಳಿದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೋಣನಕುಂಟೆ ಪೊಲೀಸ್ ಠಾಣೆಯ ವೀವರ್ಸ್ ಕಾಲನಿಯಲ್ಲಿ ಸಂಭವಿಸಿದೆ.
ನೇಕಾರನಗರದ ನಿವಾಸಿ ಬಾಲಕೃಷ್ಣ (30) ಮೃತ ವ್ಯಕ್ತಿ. ಈತ ಕೈಮಗ್ಗದ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದನೆಂದು ತಿಳಿದುಬಂದಿದೆ. ನಿನ್ನೆ ರಾತ್ರಿ 7ಗಂಟೆ ಸುಮಾರಿಗೆ ಕೋಳಿಫಾರಂ ಲೇಔಟ್ ಗೇಟ್ನ ರಸ್ತೆಯಲ್ಲಿ ಬಾಲಕೃಷ್ಣ ನಡೆದು ಬರುತ್ತಿದ್ದಾಗ ವಿದ್ಯುತ್ ಕಂಬಕ್ಕೆ ಕಟ್ಟಿದ್ದ ಕೇಬಲ್ ವೈರ್ ಕಟ್ಟಾಗಿ ನೆಲಕ್ಕೆ ಬಿದ್ದಿತ್ತು. ಆಕಸ್ಮಿಕವಾಗಿ ವೈರ್ ತುಳಿದಾಗ ವೈರ್ನಲ್ಲಿ ಹರಿಯುತ್ತಿದ್ದ ವಿದ್ಯುತ್ ಬಾಲಕೃಷ್ಣನನ್ನು ಬಲಿ ತೆಗೆದುಕೊಂಡಿದೆ.
ವಿದ್ಯುತ್ ಕಂಬದಿಂದ ಕೇಬಲ್ ಬಿಟ್ಟಿರುವುದು ಇನ್ನು ವಿದ್ಯುತ್ ಕಂಬಕ್ಕೆ ಕೇಬಲ್ ವೈರ್ ಮತ್ತು ಕೇಬಲ್ ಬಾಕ್ಸ್ ಕಟ್ಟಿದ ಆದಿಶಕ್ತಿ ಕೇಬಲ್ ನೆಟ್ವರ್ಕ್ನವರ ಬೇಜವಾಬ್ದಾರಿಯಿಂದಲೇ ಈ ಸಾವು ಸಂಭವಿಸಿದೆಯೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕೆಲಕಾಲ ಶವ ತೆಗೆಯಲು ಬಿಡದೆ ಪೊಲೀಸರೆದುರು ಊರಿನವರು ಪ್ರತಿಭಟಿಸಿದ್ದಾರೆ.
ಬಿಬಿಎಂಪಿ ಮತ್ತು ಬೆಸ್ಕಾಂನವರ ಅನುಮತಿ ಪಡೆಯದೆ ವಿದ್ಯುತ್ ಕಂಬಗಳಲ್ಲಿ ಕೇಬಲ್ ವೈರ್ ಅಳವಡಿಸಿರುವ ಆದಿಶಕ್ತಿ ಕೇಬಲ್ ಓನರ್ ಜಿಗಣಿ ಪ್ರಶಾಂತ ಸ್ಥಳಕ್ಕೆ ಬರಬೇಕೆಂದು ಸ್ಥಳೀಯರು ಪಟ್ಟು ಹಿಡಿದರು. ಬಳಿಕ ಸ್ಥಳಕ್ಕೆ ಬಂದ ಕೋಣನಕುಂಟೆ ಪೊಲೀಸರು ಜನರನ್ನು ಸಮಾಧಾನಪಡಿಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ವರ್ಗಾಯಿಸಿದ್ದಾರೆ.
ಅನಧಿಕೃತವಾಗಿ ವಿದ್ಯುತ್ ಕಂಬಕ್ಕೆ ಕೇಬಲ್ ಕಟ್ಟಿ ಅದರಲ್ಲಿ ವಿದ್ಯುತ್ ಹರಿದು ಸಾವಿಗೆ ಕಾರಣರಾದ ಕೇಬಲ್ ಮಾಲೀಕರ ಮೇಲೆ ಪ್ರಕರಣ ದಾಖಲಿಸಿ ನ್ಯಾಯ ಕೊಡಿಸುವಂತೆ ಮೃತರ ಕುಟುಂಬದವರು ಮನವಿ ಮಾಡಿದ್ದಾರೆ.