ನೆಲಮಂಗಲ : ಕಾಮಗಾರಿ ಬಿಲ್ ಪಡೆಯಲು ಗುತ್ತಿಗೆದಾರನಿಂದ 25 ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟ ಪಿಡಿಒ ಮತ್ತು ಬಿಲ್ ಕಲೆಕ್ಟರ್ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದಾರೆ. ನೆಲಮಂಗಲ ತಾಲೂಕಿನ ಟಿ. ಬೇಗೂರು ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಉಷಾ ಮತ್ತು ಬಿಲ್ ಕಲೆಕ್ಟರ್ ಪುಟ್ಟಸ್ವಾಮಿ ಕಾಮಾಗಾರಿಯ ಬಿಲ್ಲು ಮಾಡಲು ಗುತ್ತಿಗೆದಾರನಿಂದ 25 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇಂದು ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಗುತ್ತಿಗೆದಾರನಿಂದ ಲಂಚ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಗಿರೀಶ್ ಎಂಬ ಗುತ್ತಿಗೆದಾರ ಟಿ. ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿ. ಸಿ ಡ್ರೈನ್ ಕಾಮಗಾರಿಯನ್ನ ಮಾಡಿದ್ರು. ಕಾಮಗಾರಿಯ ಹಣವನ್ನು ಪಡೆಯಲು ಪಿಡಿಓ ಅವರಿಂದ ಬಿಲ್ಲನ್ನು ಪಡೆಯಬೇಕಿತ್ತು. ಕಾಮಗಾರಿಯ ಬಿಲ್ಲು ಮಾಡಿಕೊಡುವಂತೆ ಪಿಡಿಒ ಉಷಾ ಮತ್ತು ಬಿಲ್ ಕಲೆಕ್ಟರ್ ಪುಟ್ಟಸ್ವಾಮಿಯನ್ನ ಭೇಟಿ ಮಾಡಿದ್ರು. ಪಿಡಿಒ ಉಷಾ ಬಿಲ್ ಕಲೆಕ್ಟರ್ ಮೂಲಕ 25 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ರು. ಗುತ್ತಿಗೆದಾರ ಗಿರೀಶ್ ಲಂಚದ ಹಣದ ಬೇಡಿಕೆ ಇಟ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದರು, ಗಿರೀಶ್ ಅವರ ದೂರಿನ ಆಧಾರ ಮೇಲೆ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು.
ಲೋಕಾಯುಕ್ತ ಬಿ ಎಸ್ ಪಾಟೇಲರ ಸೂಚನೆಯಂತೆ ಕರ್ನಾಟಕ ಲೋಕಾಯುಕ್ತದ ಅಪರ ಪೊಲೀಸ್ ಮಹಾ ನಿರ್ದೇಶಕರಾದ ಪ್ರಶಾಂತ್ ಕುಮಾರ್ ಹಾಗೂ ಪೊಲೀಸ್ ಅಧೀಕ್ಷರಾದ ಮಾಹದೇವ್ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಎಂ. ಶ್ರೀನಿವಾಸ್ ನೇತೃತ್ವದ ಲೋಕಾಯುಕ್ತ ತಂಡ ದಾಳಿ ನಡೆಸಿತು.