ಬೆಂಗಳೂರು: ಒಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಪಡೆ ಬಲಗೊಳ್ಳುತ್ತಿದೆ. ಇನ್ನೊಂದೆಡೆ ಮೂಲ ಕಾಂಗ್ರೆಸಿಗರ ಮುನಿಸು ಮತ್ತೆ ತಾರಕಕ್ಕೇರಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ದಿಲ್ಲಿಗೆ ತೆರಳಿ ಸಾಕಷ್ಟು ಲಾಬಿ ನಡೆಸಿ ಪ್ರತಿಪಕ್ಷದ ನಾಯಕ ಸ್ಥಾನವನ್ನು ಬಹುತೇಕ ಗಿಟ್ಟಿಸಿಕೊಂಡು ವಾಪಸ್ಸಾಗಿರುವ ಸಿದ್ದರಾಮಯ್ಯ ಮೇಲೆ ಮೂಲ ಕಾಂಗ್ರೆಸಿಗರು ಮುನಿಸಿಕೊಂಡಿದ್ದಾರೆ. ಅದು ಇಂದಿನ ಸಿಎಲ್ಪಿ ಸಭೆಯ ಮೂಲಕ ವ್ಯಕ್ತವಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಿಎಂ ಹಾಗೂ ಸಿಎಲ್ಪಿ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಆರಂಭವಾಗಿದ್ದು, ಮೂಲ ಕಾಂಗ್ರೆಸಿಗರಾದ ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್, ರಾಜಶೇಖರ್ ಪಾಟೀಲ್, ಸತೀಶ್ ಜಾರಕಿಹೊಳಿ, ಶಿವಾನಂದ ಪಾಟೀಲ್, ರಾಮಲಿಂಗಾರೆಡ್ಡಿ ಗೈರಾಗಿದ್ದಾರೆ.
ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಸಭೆಗೆ ಹಾಜರಾಗಿದ್ದಾರೆ. ಆದರೆ ಅನ್ಯಮನಸ್ಕರಾಗಿ ಕುಳಿತಿದ್ದಾರೆ.
ಮಾಜಿ ಡಿಸಿಎಂ ದೂರ ದೂರ
ಕಾಂಗ್ರೆಸ್ ಶಾಸಕಾಂಗ ಸಭೆಯಿಂದ ದೂರವೇ ಉಳಿದಿರುವ ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್ ಇಂದಿನ ಶಾಸಕಾಂಗ ಪಕ್ಷದ ಸಭೆಯ ಬಗ್ಗೆಯೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಡೆಯ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಪರಮೇಶ್ವರ್, ಸಿದ್ದರಾಮಯ್ಯಗೆ ವಿಪಕ್ಷ ನಾಯಕನ ಸ್ಥಾನ ನೀಡುವ ಬಗ್ಗೆಯೂ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.