ದೊಡ್ಡಬಳ್ಳಾಪುರ:ಬಿಎಸ್ಸಿ ಅಗ್ರಿಕಲ್ಚರ್ ಅಂತಿಮ ವರ್ಷದ ವಿದ್ಯಾರ್ಥಿಗಳು ಹಳ್ಳಿಯಲ್ಲಿ 45 ದಿನಗಳ ಗ್ರಾಮ ವಾಸ್ತವ್ಯ ಹೂಡುತ್ತಿದ್ದು, ರೈತರಿಗೆ ಸಾವಯವ ಕೃಷಿ ಬಗ್ಗೆ ಅರಿವು ಮೂಡಿಸಲಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಮಾದಗೊಂಡನ ಹಳ್ಳಿಯಲ್ಲಿ ರೈ ಟೆಕ್ನಾಲಜಿ ಕಾಲೇಜಿನ ಅಂತಿಮ ವರ್ಷದ ಬಿಎಸ್ಸಿ ಅಗ್ರಿಕಲ್ಚರ್ ವಿಭಾಗದ ವಿದ್ಯಾರ್ಥಿಗಳು 45 ದಿನಗಳ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಅಂತಿಮ ವರ್ಷದ ವಿದ್ಯಾರ್ಥಿಗಳು ರಾವೆ ಕ್ಯಾಂಪ್ ನಡೆಸುವುದು ವಿದ್ಯಾಭ್ಯಾಸದ ಭಾಗವಾಗಿದ್ದು, ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಮೂಲಕ ಹಳ್ಳಿ ಜೀವನವನ್ನು ಬರೀ ಪುಸ್ತಕದಲ್ಲಿ ಓದದೇ ಪ್ರಯೋಗಿಕ ಅನುಭವ ಪಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ.
ಬೆಳಗ್ಗೆಯೇ ಎದ್ದು ಗ್ರಾಮದಲ್ಲಿ ಹಸುವಿನ ಸಗಣಿ ತೆಗೆದುಕೊಂಡು ಗ್ರಾಮದಲ್ಲಿಯೇ ರೈತರ ಮುಂದೆಯೇ ಸಾವಯವ ಗೊಬ್ಬರ ತಯಾರಿಸುತ್ತಾರೆ. ವಿಶೇಷವಾಗಿ ಹೈನುಗಾರಿಕೆಗೆ ಉತ್ತೇಜನ ನೀಡುವುದರ ಜತೆಗೆ ಹಸುಗಳ ಪೋಷಣೆ, ಆಹಾರ ಪದ್ಧತಿಗಳ ಬಗ್ಗೆ ರೈತರಿಗೆ ತಿಳುವಳಿಕೆ ನೀಡುವುದು ಹಾಗೂ ಹಸುಗಳಲ್ಲಿ ಹಾಲು ಹಿಂಡುವುದನ್ನು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಸಾವಯವ ಗೊಬ್ಬರ ತಯಾರಿಕೆ, ಅಜೋಲಾ ಬೆಳೆಯುವುದು ಹಾಗೂ ಕೈತೋಟ ನಿರ್ಮಾಣ ಮಾಡಿ ಕೃಷಿ ಜ್ಞಾನವನ್ನು ಪ್ರಾಯೋಗಿಕವಾಗಿ ಕಲಿಯುತ್ತಿದ್ದಾರೆ.