ದೊಡ್ಡಬಳ್ಳಾಪುರ: ವಿರೋಧ ಪಕ್ಷದ ನಾಯಕ ಆರ್.ಅಶೋಕ್ ರಾಜ್ಯಾದ್ಯಂತ ಬರ ವೀಕ್ಷಣೆಯ ಪ್ರವಾಸದಲ್ಲಿದ್ದಾರೆ. ಆದರೆ ದೊಡ್ಡಬಳ್ಳಾಪುರಕ್ಕೆ ತಡವಾಗಿ ಬಂದ ಅವರು ಕತ್ತಲಲ್ಲೇ ಬರ ವೀಕ್ಷಣೆ ಮಾಡಿದರು. ಟಾರ್ಚ್ ಬೆಳಕಿನಲ್ಲೇ ರಾಗಿ ಹೊಲವನ್ನು ವೀಕ್ಷಣೆ ಮಾಡಿದರು. ಇದೇ ವೇಳೆ ಅವರು ಬರದಿಂದ ರೈತರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು.
ನಿನ್ನೆ ಸಂಜೆ 5.15ಕ್ಕೆ ದೊಡ್ಡಬಳ್ಳಾಪುರದ ಕೋಡಿಹಳ್ಳಿ ಗ್ರಾಮದಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಇತ್ತು. ಆದರೆ ಅವರು ಬರುವ ಹೊತ್ತಿಗೆ 7 ಗಂಟೆಯಾಗಿತ್ತು. ಸಂಪೂರ್ಣವಾಗಿ ಕತ್ತಲು ಆವರಿಸಿದ್ದರಿಂದ, ಟಾರ್ಚ್ ಬೆಳಕಿನಲ್ಲೇ ಹೊಲವನ್ನು ಪರಿಶೀಲಿಸಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರೈತರು ಬರಗಾಲದಿಂದ ಕಂಗಾಲಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಇನ್ನೊಂದೆಡೆ ಬೋರ್ವೆಲ್ಗಳಿಂದ ನೀರನ್ನು ಕರೆಂಟ್ ಕೂಡ ಸರ್ಕಾರ ಸರಿಯಾಗಿ ಕೊಡುತ್ತಿಲ್ಲ. ಈಗ ಅಧಿವೇಶನ ಇದೆ ಎನ್ನುವ ಒಂದೇ ಒಂದು ಕಾರಣಕ್ಕಾಗಿ ಮೊದಲು 3 ಗಂಟೆ ಕೊಡ್ತಿದ್ರು, ಕೆಲವು ಕಡೆ 6 ಗಂಟೆಗೆ ಕೆಲವು ಕಡೆ 7 ಗಂಟೆಗೆ ಹೆಚ್ಚು ಮಾಡಿದ್ದಾರೆ. ಬರಗಾಲ ಘೋಷನೆಯಾದಾಗ ಮಾಡದವರು, ಈಗ ಅಧಿವೇಶನ ಇದೆ ಎನ್ನುವ ಕಾರಣಕ್ಕೆ ರೈತರಿಗೆ 1 ರಿಂದ 2 ಸಾವಿರ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ರೈತರು ಛೀಮಾರಿ ಹಾಕುತ್ತಿದ್ದಾರೆ. ನಾವು ರಾಗಿ ಬೆಳೆಯೋಕೆ ಎಕರೆಗೆ 15 ಸಾವಿರ ಕೊಟ್ಟಿದ್ದೇವೆ. ಅಧಿವೇಶನದಲ್ಲಿ ವಿರೋಧ ಪಕ್ಷ ಪ್ರಶ್ನಿಸಿದಾಗ ಉತ್ತರ ಕೊಡಲಷ್ಟೇ ಈ ಘೋಷನೆ ಮಾಡಿದ್ದಾರೆ ಎಂದು ಹೇಳಿದರು.