ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ):ಕೊರೊನಾ ಲಾಕ್ಡೌನ್ನಿಂದಾಗಿ ಮಾರುಕಟ್ಟೆ ಇಲ್ಲದೆ ಮಾವು ಬೆಳೆಗಾರರು ನಷ್ಟಕ್ಕೆ ಸಿಲುಕಿದ್ದರು. ಈ ಸಮಯದಲ್ಲಿ ಮಾವು ಬೆಳೆಗಾರರ ಕೈ ಹಿಡಿದದ್ದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಆರಂಭಿಸಿರುವ 'ಕರ್ ಸಿರಿ' ಆನ್ಲೈನ್ ಪೋರ್ಟಲ್. ಇದರ ಮೂಲಕ ರೈತರು ತಾವು ಬೆಳೆದ ತಾಜಾ ಮಾವಿನ ಹಣ್ಣುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ.
ದೇವನಹಳ್ಳಿ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ಮಾವು ಬೆಳಗಾರ ವಿ.ಸುಬ್ಬಣ್ಣ ತಮ್ಮ 40 ಎಕರೆ ಜಮೀನಿನ ಪೈಕಿ 12 ಎಕರೆ ಜಮೀನಿನಲ್ಲಿ ಮಲ್ಲಿಕಾ, ವೇನಿಶಾ, ಬಾದಾಮಿ, ನಷೇರಿ, ಮಲಗೋಬ ,ತೊತಾಪುರಿ, ಸಿಂಧೂ, ಐಶ್ವರ್ಯ ಸೇರಿದಂತೆ ಹಲವು ತಳಿಯ ಮಾವು ಬೆಳೆಯುತ್ತಾರೆ. ಮಾವಿನ ಬೆಳೆಯಿಂದ ಪ್ರತಿ ವರ್ಷ 12 ರಿಂದ 15 ಲಕ್ಷ ರೂ. ಆದಾಯ ಗಳಿಸುತ್ತಿದ್ದರು. ಆದರೆ, ಕೊರೊನಾ ಲಾಕ್ಡೌನ್ನಿಂದಾಗಿ ಈ ಬಾರಿ ಮಾರುಕಟ್ಟೆಯಲ್ಲಿ ಮಾವಿನ ಬೆಲೆ ಗಣನೀಯವಾಗಿ ಕುಸಿದಿತ್ತು.
ಈ ವೇಳೆ ಸುಬ್ಬಣ್ಣ ಅವರು 'ಕರ್ ಸಿರಿ' ಆನ್ಲೈನ್ ಪೋರ್ಟಲ್ ಮೂಲಕ ಗ್ರಾಹಕರಿಗೆ ಮಾವಿನ ಹಣ್ಣು ಪೂರೈಸಲು ಮುಂದಾದ್ರು. ಮಾವು ಬೆಳೆದ ರೈತ ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸುವ ಬ್ಯುಸಿನೆಸ್ ಟೂ ಬ್ಯುಸಿನಸ್ (B2B) ಯೋಜನೆಯಡಿ ಆನ್ಲೈನ್ ಮಾವು ವ್ಯಾಪಾರ ಜಾರಿ ಮಾಡಲಾಗಿದ್ದು, ಇದರ ಮೂಲಕ ಗ್ರಾಹಕರು ತಮ್ಮ ಮನೆಯಲ್ಲಿಯೇ ಕುಳಿತು ರೈತರಿಂದ ನೇರವಾಗಿ ಮಾವಿನ ಹಣ್ಣನ್ನು ಮನೆ ಬಾಗಿಲಿಗೆ ತರಿಸಿಕೊಳ್ಳಬಹುದಾಗಿದೆ. ಸುಬ್ಬಣ್ಣ ಅವರಿಗೂ ಸಹ ಆನ್ಲೈನ್ ಮಾರುಕಟ್ಟೆಯಿಂದ ಸಾಕಷ್ಟು ಅನುಕೂಲವಾಗಿದೆ.