ನೆಲಮಂಗಲ: ಕೆಲಸದ ಆಸೆಗೆ ಅಪರಿಚಿತರಿಗೆ ಅಕೌಂಟ್ ಡಿಟೇಲ್ಸ್ ಕೊಟ್ಟ ಯುವಕನೊಬ್ಬ ಹಣ ಕಳೆದುಕೊಂಡ ವಿಚಾರ ಬೆಳಕಿಗೆ ಬಂದಿದೆ.
ನಗರದ ಅರಿಶಿನಕುಂಟೆಯ ಆದರ್ಶನಗರದ ನಿವಾಸಿ ಲೋಕೇಶ್ ವಂಚನೆಗೊಳಗಾಗಿ ವ್ಯಕ್ತಿ. ಬೆಂಗಳೂರಿನ ಸುಂಕದಕಟ್ಟೆಯ ಖಾಸಗಿ ಕಂಪನಿಯಲ್ಲಿ ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದ ಲೋಕೇಶ್, ಲಾಕ್‌ಡೌನ್ ವೇಳೆ ಕೆಲಸ ಕಳೆದುಕೊಂಡಿದ್ದರು. ಹೊಸ ಕೆಲಸಕ್ಕಾಗಿ ಅಲೆದಾಡಿ, ಬಳಿಕ ಆನ್ಲೈನ್ನಲ್ಲಿ ಉದ್ಯೋಗ ಹುಡುಕಲು ಶುರು ಮಾಡಿದ್ದರು. ಅಲ್ಲೂ ಯಾವುದೇ ಸರಿಯಾದ ಕೆಲಸ ಸಿಕ್ಕಿರಲಿಲ್ಲ.
ಈ ವೇಳೆ ಲೋಕೇಶ್ ಅವರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ, ನಾನು ಕಂಪನಿಯೊಂದರ ಮ್ಯಾನೇಜರ್ ಮಾತನಾಡುತ್ತಿದ್ದೇನೆ. ನೀವು ಕೆಲಸ ಹುಡುಕುತ್ತಿರುವ ವಿಚಾರ ನಮ್ಮ ಗಮನಕ್ಕೆ ಬಂದಿದೆ. ನಮ್ಮ ಕಂಪನಿಯಲ್ಲಿ ನಿಮಗೆ ಕೆಲಸ ಕೊಡುತ್ತೇವೆ ನಿಮ್ಮ ಮಾಹಿತಿ ನೀಡಿ ಎಂದಿದ್ದಾರೆ. ಮೊದಲೇ ಕೆಲಸವಿಲ್ಲದೆ ಹತಾಶರಾಗಿದ್ದ ಲೋಕೇಶ್, ಕೆಲಸ ಸಿಕ್ಕಿತಲ್ಲ ಎಂದುಕೊಂಡು ಆಧಾರ್ ಕಾರ್ಡ್, ಪಾನ್ ಕಾರ್ಡ್ ನಂಬರ್, ವಿಳಾಸ ಸೇರಿದಂತೆ ಎಲ್ಲಾ ಮಾಹಿತಿಯನ್ನು ನೀಡಿದ್ದಾರೆ. ಈ ವೇಳೆ ಆ ಕಡೆಯಿಂದ ಪ್ರತಿಕ್ರಿಯಿಸಿದ ಅಪರಿಚಿತ ವ್ಯಕ್ತಿ, ಸಂಬಳ ಜಮಾ ಮಾಡಲು ಬ್ಯಾಂಕ್ ಖಾತೆಯ ಮಾಹಿತಿ ಬೇಕಾಗಿದೆ ನೀಡಿ ಎಂದಿದ್ದಾನೆ. ಆತನ ಮಾತು ನಂಬಿದ ಅಮಾಯಕ ಲೋಕೇಶ್ ಅಕೌಂಟ್ ನಂಬರ್ ನೀಡಿದ್ದಾರೆ. ಮತ್ತೆ ಸಂಪರ್ಕಿಸಿದ ಅಪರಿಚಿತ ಲೋಕೇಶ್ ಮೊಬೈಲ್ಗೆ ಬಂದಿದ್ದ ಒಟಿಪಿ ಸಂಖ್ಯೆಯನ್ನೂ ಪಡೆದುಕೊಂಡಿದ್ದ.
ಆನ್ಲೈನ್ ವಂಚಕ ಶಾಪಿಂಗ್ ಮಾಡಿದ ಮಾಹಿತಿ ಲೋಕೇಶ್ ಒಟಿಪಿ ನೀಡಿದ್ದೇ ತಡ ಅಪರಿಚಿತ ವ್ಯಕ್ತಿ ಫ್ಲಿಫ್ ಕಾರ್ಟ್ ಸೇರಿದಂತೆ ವಿವಿಧ ಇ- ಕಾರ್ಮಸ್ ಕಂಪನಿಗಳಿಂದ ಆನ್ಲೈನ್ ಶಾಪಿಂಗ್ ಮಾಡಿ ಲೋಕೇಶ್ ಖಾತೆಯಿಂದ ಪೇಮೆಂಟ್ ಮಾಡಿದ್ದಾನೆ. ಸೈಬರ್ ವಂಚಕ ಲೋಕೇಶ್ ಅವರ ಖಾತೆಯಿಂದ ಒಟ್ಟು 24, 300 ರೂ. ಎಗರಿಸಿದ್ದಾನೆ. ಮೊಬೈಲ್ಗೆ ಬಂದ ಮೆಸೇಜ್ ನೋಡಿದಾಗ ಲೋಕೇಶ್ಗೆ ತಾನು ಮೋಸ ಹೋಗಿರುವ ವಿಚಾರ ಗೊತ್ತಾಗಿದೆ. ಮೊದಲೇ ಕೆಲಸವಿಲ್ಲದೆ ಕಂಗಾಲಾಗಿದ್ದ ಯುವಕ ಹಣ ಕಳೆದುಕೊಂಡು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ನೆಲಮಂಗಲ ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.