ಬೆಂಗಳೂರು: ಸದ್ಯ ಕರ್ನಾಟಕದ ಮೂಲಕ ಸಾಗುತ್ತಿರುವ ಕಾಂಗ್ರೆಸ್ ಪಕ್ಷದ ಭಾರತ್ ಜೋಡೊ ಯಾತ್ರೆಗೆ ಅಕ್ಟೋಬರ್ 17ರಂದು ವಿರಾಮ ಇರಲಿದೆ. ಅವತ್ತು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ನಡೆಯಲಿರುವುದರಿಂದ ಯಾತ್ರೆಗೆ ಬ್ರೇಕ್ ನೀಡಲಾಗಿದೆ.
ಯಾತ್ರೆಯಲ್ಲಿ ಪಾಲ್ಗೊಂಡಿರುವ ಮುಖಂಡ ರಾಹುಲ್ ಗಾಂಧಿ ಮತ್ತು ಸುಮಾರು 40 ಜನ ಪ್ರದೇಶ ಕಾಂಗ್ರೆಸ್ ಕಮೀಟಿ ಪದಾಧಿಕಾರಿಗಳಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಅವರಿರುವ ಕ್ಯಾಂಪ್ ಸ್ಥಳದಲ್ಲೇ ಪೋಲಿಂಗ್ ಬೂತ್ ಸ್ಥಾಪಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮತದಾರರು ತಮ್ಮ ಹಕ್ಕು ಚಲಾಯಿಸಲು ತಮ್ಮ ಗುರುತಿನ ಚೀಟಿ ಹೊಂದಿದ್ದರೆ ಸಾಕು ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಸ್ಪಷ್ಟವಾಗಿ ಹೇಳಿದ್ದಾರೆ. ಪಕ್ಷದ ಹಿರಿಯ ನಾಯಕ ಮಧುಸೂದನ್ ಮಿಸ್ತ್ರಿ ನೇತೃತ್ವದಲ್ಲಿ ಕೇಂದ್ರ ಚುನಾವಣಾ ಪ್ರಾಧಿಕಾರವು ಚುನಾವಣಾ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಲಿದ್ದು, ಸೆಪ್ಟೆಂಬರ್ 22 ರಂದು ಅಧಿಸೂಚನೆ ಹೊರಡಿಸಲಾಗಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಅಕ್ಟೋಬರ್ 8 ಮತ್ತು ಫಲಿತಾಂಶವನ್ನು ಅಕ್ಟೋಬರ್ 19 ರಂದು ಪ್ರಕಟಿಸಲಾಗುವುದು.
ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸಿದರೆ ಮಾತ್ರ ಮತದಾನ ನಡೆಯುತ್ತದೆ. ನಾಮಪತ್ರ ಹಿಂತೆಗೆದುಕೊಳ್ಳುವ ದಿನಾಂಕದ ನಂತರ ಒಬ್ಬ ಅಭ್ಯರ್ಥಿ ಮಾತ್ರ ಉಳಿದರೆ, ಅವರು ಅವಿರೋಧವಾಗಿ ಆಯ್ಕೆಯಾಗುತ್ತಾರೆ.
ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ, ಹಿರಿಯ ನಾಯಕ ಮಧುಸೂದನ್ ಮಿಸ್ತ್ರಿ ಅವರು ಚುನಾವಣಾ ಪ್ರಕ್ರಿಯೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಪಕ್ಷದ ಅಧ್ಯಕ್ಷೀಯ ಚುನಾವಣೆ ಕುರಿತು ಸೆಪ್ಟೆಂಬರ್ 22 ರಂದು ಪ್ರಕಟಣೆ ಹೊರಡಿಸಲಾಗಿತ್ತು. ಸೆಪ್ಟೆಂಬರ್ 24 ರಿಂದ 30ರ ವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಅಕ್ಟೋಬರ್ 1ರಂದು ನಾಮಪತ್ರಗಳ ಪರಿಶೀಲನೆ ನಡೆದಿತ್ತು. ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಹಿಂಪಡೆಯಲು ಅಕ್ಟೋಬರ್ 8ರ ವರೆಗೆ ಸಮಯಾವಕಾಶವಿತ್ತು.