ದೊಡ್ಡಬಳ್ಳಾಪುರ: ವಿದ್ಯೆ ಕಲಿಸಿದ ಗುರುಗಳಿಗೆ ಹಳೇ ವಿದ್ಯಾರ್ಥಿಯೋರ್ವ ಸರ್ಕಾರಿ ಕೆಲಸ ಕೊಡಿಸುವ ಆಸೆ ಹುಟ್ಟಿಸಿ ಪಂಗನಾಮ ಹಾಕಿದ್ದಾನೆ ಎಂದು ದೂರು ದಾಖಲಾಗಿದೆ.
ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ವ್ಯಕ್ತಿ, ಶಿಷ್ಯನ ಮಾತಿನ ಮೋಡಿಗೆ 65 ಜನ ಸ್ನೇಹಿತರಿಂದ 98 ಲಕ್ಷ ರೂ. ಹಣ ಕೊಡಿಸಿದ್ದು, ಈಗ ಅವರಿಂದ ತಪ್ಪಿಸಿಕೊಳ್ಳಲು ಮನೆಬಿಟ್ಟು ಅಲೆದಾಡುವ ಸ್ಥಿತಿ ಎದುರಾಗಿದೆ.
ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ ಹನುಮಂತಯ್ಯ ಡಿ.ಹೆಚ್. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಹೆಜ್ಜಾಜಿ ಗ್ರಾಮದ ನಿವಾಸಿ. ಇವರು ದೊಡ್ಡಬಳ್ಳಾಪುರ ನಗರದ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಆದರೆ, ಶಿಷ್ಯನ ರೂಪದಲ್ಲಿ ಪರಿಚಯವಾದ ಹಳೇ ವಿದ್ಯಾರ್ಥಿ ಶಿಕ್ಷಕನಿಗೆ ಪಂಗನಾಮ ಹಾಕಿದ್ದಾನೆ.
ದೊಡ್ಡಬಳ್ಳಾಪುರ ನಗರದ ಚಿಕ್ಕಪೇಟೆಯ ನಿವಾಸಿ ಮಹೇಶ್ ಸಿ. ಶಿಕ್ಷಕ ಹನುಮಂತಯ್ಯ ಕೆಲಸ ಮಾಡುತ್ತಿದ್ದ ಶಾಲೆಯ ಹಳೇ ವಿದ್ಯಾರ್ಥಿ. ಈತ 2017ರಲ್ಲಿ ತಾನು ಹಳೇ ವಿದ್ಯಾರ್ಥಿಯೆಂದು ಪರಿಚಯ ಮಾಡಿಕೊಂಡಿದ್ದಾನೆ. ತಾನು ಎಂಎಸ್ ಬಿಲ್ಡಿಂಗ್ನಲ್ಲಿ ಕೆಲಸ ಮಾಡುವುದಾಗಿ ಹೇಳಿ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದಾನೆ. ಶಿಷ್ಯನ ಮಾತು ನಂಬಿದ ಹನುಮಂತಯ್ಯ ಸರ್ಕಾರಿ ಕೆಲಸದ ಅಮಿಷಕ್ಕೆ ಒಳಗಾಗಿ ತನ್ನ ಹೆಂಡತಿಗೂ ಸರ್ಕಾರಿ ಕೆಲಸ ಕೊಡಿಸುವಂತೆ ಹೇಳಿ 5 ಲಕ್ಷ ಹಣ ಕೊಟ್ಟಿದ್ದರು. ಇಷ್ಟಕ್ಕೆ ಸುಮ್ಮನಾಗದ ಮಹೇಶ್ ನಿಮ್ಮ ಸ್ನೇಹಿತರಿಗೂ ಸರ್ಕಾರಿ ಕೆಲಸ ಕೊಡಿಸುವ ಶಿಕ್ಷಕರಿಗೆ ಆಸೆ ಹುಟ್ಟಿಸಿದ್ದಾನೆ. ಶಿಷ್ಯನ ಮಾತಿಗೆ ಮರುಳಾಗಿ ತನ್ನ ಸ್ನೇಹಿತರ ವಲಯದ 80 ಜನರಿಂದ ಒಟ್ಟು 98 ಲಕ್ಷ ಹಣವನ್ನ ಕೊಡಿಸಿದ್ದಾರೆ.
ಆದರೀಗ ಸರ್ಕಾರಿ ಕೆಲಸನೂ ಇಲ್ಲ, ಕೊಟ್ಟ ಹಣವೂ ಇಲ್ಲದಂತಾಗಿದೆ. ಸರ್ಕಾರಿ ಕೆಲಸದ ಆಸೆ ಹುಟ್ಟಿಸಿದ ಮಹೇಶ್ ತನಗೆ ಎಂಎಸ್ ಬಿಲ್ಡಿಂಗ್ನಲ್ಲಿ ಅಧಿಕಾರಿಗಳು ಗೊತ್ತು ಎಂದು ಹೇಳಿ ನಕಲಿ ಆಯ್ಕೆ ಪಟ್ಟಿ ಸಿದ್ಧಪಡಿಸಿಕೊಂಡಿದ್ದಾನೆ. ಎಸ್ಎಸ್ಎಲ್ಸಿ ಪಾಸಾದವರಿಗೆ 50 ಸಾವಿರ, ಪಿಯುಸಿ ಪಾಸಾದವರಿಗೆ 1 ಲಕ್ಷ, ಡಿಗ್ರಿ ಪಾಸಾದವರಿಗೆ 2 ಲಕ್ಷಕ್ಕೆ ಸರ್ಕಾರಿ ಕೆಲಸದ ಅಮಿಷ ತೋರಿಸಿ ಸುಮಾರು 98 ಲಕ್ಷ ಹಣವನ್ನು ತೆಗೆದುಕೊಂಡಿದ್ದಾನೆ. ಹಣ ತಗೊಂಡ ಮಹೇಶ್ ತನ್ನ ಅಣ್ಣ ಜಯಶಂಕರ, ಭಾವ ಮಂಜುನಾಥ್, ಸ್ನೇಹಿತ ಶಶಿಕುಮಾರ್ ಮತ್ತು ಮಾರ್ವಾಡಿಯೊಬ್ಬರ ಜೊತೆ ಸೇರಿದ್ದಾನೆ. ಮಹೇಶ್ನ ತಲೆ ಕೆಡಿಸಿದ ಇವರು ಹಣವನ್ನ ತಗೊಂಡು ಫೈನಾನ್ಸ್, ಜಮೀನು ಖರೀದಿ, ಮತ್ತು ತೋಟದಲ್ಲಿ ಬೋರ್ವೇಲ್ ಕೊರೆಸಿದ್ದಾರೆ ಎಂಬಾರೋಪ ಕೇಳಿ ಬಂದಿದ್ದು, ಇದಕ್ಕೆ ಸಂಬಂಧಪಟ್ಟಂತೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಮಹೇಶನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
ಸದ್ಯ ಮಹೇಶ್ ಜಾಮೀನಿನ ಮೇಲೆ ಹೊರಬಂದಿದ್ದು, ಹಣ ಕೊಡದೆ ಸತಾಯಿಸುತ್ತಿದ್ದಾನೆ ಎಂದು ಹನುಮಂತಯ್ಯ ಅವರು ಆರೋಪಿಸಿದ್ದಾರೆ.
ಪ್ರಕರಣ ದಾಖಲಾಗಿ 6 ತಿಂಗಳಾದರೂ ಯಾವುದೇ ಪ್ರಗತಿಯಾಗಿಲ್ಲ. ಅಂತಿಮವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಮೇಲೆ ಅಪಾರ ನಿರೀಕ್ಷೆ ಇಟ್ಟಿಕೊಂಡಿರುವ ಹನುಮಂತಯ್ಯ ಕುಟುಂಬ, ಅವರನ್ನು ಭೇಟಿ ಮಾಡಿ ತಮ್ಮ ನೋವು ತೊಡಿಕೊಳ್ಳುವುದಾಗಿ ಹೇಳಿದೆ.