ನವ ವಿವಾಹಿತೆ ಅನುಮಾನಾಸ್ಪದ ಸಾವು.. ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ) :ಮದುವೆಯಾಗಿ ಒಂದು ವರ್ಷ ಸಹ ಆಗಿರಲಿಲ್ಲ, ಪದೇ ಪದೇ ತವರು ಮನೆಯಿಂದ ಹಣ ತರುವಂತೆ ಧನದಾಹಿ ಗಂಡ ಪೀಡಿಸುತ್ತಿದ್ದನು. ಸಾಲದು ಅಂತ ಹೊಟ್ಟೆಯಲ್ಲಿದ್ದ ಒಂದೂವರೆ ತಿಂಗಳ ಶಿಶುವನ್ನು ಸಹ ಅತ್ತೆ, ಗರ್ಭಪಾತ ಮಾಡಿಸಿದ್ದರು. ಇದೀಗ ನವ ವಿವಾಹಿತೆ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಗಂಡನ ಮನೆಯವರೇ ಕೊಲೆ ಮಾಡಿದ್ದಾರೆಂದು ಮೃತಳ ಪೋಷಕರು ಆರೋಪ ಮಾಡಿದ್ದಾರೆ.
ಮಹಿಳೆಯ ತವರಿಗೆ ಮಾಹಿತಿ ನೀಡದೇ ಗಂಡನ ಮನೆಯವರು ಪರಾರಿ.. ದೊಡ್ಡಬಳ್ಳಾಪುರ ತಾಲೂಕಿನ ಅಂಚಾರ್ಲಹಳ್ಳಿಯಲ್ಲಿ ಇಂದು ಬೆಳಗ್ಗೆ ಘಟನೆ ನಡೆದಿದ್ದು, ಸುಮಾರು 22 ವರ್ಷದ ನವ ವಿವಾಹಿತೆ ತನುಶ್ರೀ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಅವರ ಸಾವಿನ ಸುದ್ದಿಯನ್ನು ತವರು ಮನೆಗೆ ತಿಳಿಸದೇ ಗಂಡನ ಮನೆಯವರು ಪರಾರಿಯಾಗಿದ್ದಾರೆ. ಇನ್ನು, ಈ ಸಾವಿನ ಸುದ್ದಿ ಮೂರನೇ ವ್ಯಕ್ತಿಗಳಿಂದ ತಿಳಿದು ಬಂದ ಹೆತ್ತವರಿಗೆ ಮಗಳ ಮುಖವನ್ನು ನೋಡಲು ಸಾಧ್ಯವಾಗದೆ ಕಣ್ಣೀರಿಡುತ್ತಿದ್ದಾರೆ.
ಮೃತ ತನುಶ್ರೀ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಜಂಗಮಸೀಗೆಹಳ್ಳಿಯ ನಿವಾಸಿ, ಕಳೆದ ವರ್ಷ ಮೇ ತಿಂಗಳಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಅಂಚಾರ್ಲಹಳ್ಳಿಯ ನವೀನ್ ಕುಮಾರ್ ಎಂಬುವವರ ಜೊತೆ ತನುಶ್ರೀ ಅವರ ಮದುವೆ ಮಾಡಲಾಗಿತ್ತು. ಮದುವೆ ಸಮಯದಲ್ಲಿ ಪೋಷಕರು 750 ಚಿನ್ನಾಭರಣ ಸೇರಿದಂತೆ ದೊಡ್ಡಬಳ್ಳಾಪುರ ನಗರದಲ್ಲಿ ಅದ್ದೂರಿ ಮದುವೆ ಮಾಡಿಕೊಟ್ಟಿದ್ದರಂತೆ.
ವರದಕ್ಷಿಣೆಗಾಗಿ ಹೆಂಡತಿಯನ್ನು ಪೀಡಿಸುತ್ತಿದ್ದ ಆರೋಪ :ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ ನವೀನ್ ಕುಮಾರ್ ಗೆ ಹಣದಾಹ ಇತ್ತು, ವರದಕ್ಷಿಣೆ ಹಣಕ್ಕಾಗಿ ಪದೇ ಪದೇ ಹೆಂಡತಿಯನ್ನು ತವರು ಮನೆಗೆ ಕಳಿಸುತ್ತಿದ್ದನಂತೆ. ಮಗಳ ಸುಖ ಸಂತೋಷಕ್ಕಾಗಿ ಹೆತ್ತವರು ಹಣವನ್ನು ಕೊಟ್ಟು ಕಳಿಸುತ್ತಿದ್ದರು. ಇದೇ ರೀತಿ ಫೆಬ್ರವರಿ 9ರಂದು ಸಹ 1 ಲಕ್ಷ 20 ಸಾವಿರ ಹಣವನ್ನು ಕೊಟ್ಟು ಕಳಿಸಿದರಂತೆ. ಇಷ್ಟಕ್ಕೂ ಸುಮ್ಮನಾಗದ ಗಂಡನ ಮನೆಯ ಪಾಪಿಗಳು ಮಗಳನ್ನೇ ಕೊಂದು ಹಾಕಿದ್ದಾರೆಂದು ಮೃತಳ ತಂದೆ ತಾಯಿ ಆರೋಪ ಮಾಡಿದ್ದಾರೆ.
ಮೃತಳ ಕುಟುಂಬಸ್ಥರಿಂದ ಕೊಲೆ ಆರೋಪ :ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತನುಶ್ರೀ ಕುಟುಂಬಸ್ಥರು ವರದಕ್ಷಿಣಿ ಕಿರುಕುಳದಿಂದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ. ಇನ್ನೂ ಗಂಡನ ಮನೆಯವರ ಕಿರುಕುಳದಿಂದ ನವ ವಿವಾಹಿತೆ ತನುಶ್ರೀ ಗಂಡನ ಮನೆಯಲ್ಲಿ ನೇಣು ಹಾಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಕುಂಟುಬಸ್ಥರು ಕಂಡು ಆಕೆಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದರಂತೆ ಆದರೇ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾಳೆ. ಆದರೆ ಮೃತಳ ಕುಟುಂಬಸ್ಥರು ಮಾತ್ರ ಈ ಸಾವಿಗೆ ಅತ್ತೆ ಸುವರ್ಣಮ್ಮ, ಮೈದುನ ಕಿರಣ್ ಕುಮಾರ್, ಗಂಡ ನವೀನ್ ಕುಮಾರ್ ಕಾರಣ. ಎಲ್ಲ ಸೇರಿ ಹೊಡೆದು ಸಾಯಿಸಿದ್ದಾರೆಂದು ಆರೋಪ ಮಾಡಿದ್ದು, ಅವರಿಗೆ ತಕ್ಕ ಶಿಕ್ಷೆಯಾಗಲೇಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ :ಪತ್ನಿಯ ಕತ್ತು ಸೀಳಿ ಹತ್ಯೆ ಮಾಡಿದ ಪತಿ; ಹಾಡಹಗಲೇ ಅಶೋಕನಗರ ವ್ಯಾಪ್ತಿಯಲ್ಲಿ ಘಟನೆ