ಆನೇಕಲ್: ಹೊಸಕೋಟೆ ತಾಲೂಕಿನ ಗಡಿ ಗ್ರಾಮ ನೆರಿಗಾದಲ್ಲಿ 44 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆ ಪ್ರಾಥಮಿಕ ಸಂಪರ್ಕ ಪರಿಶೀಲನೆಗೆ ಹಿಂದೇಟು ಹಾಕುತ್ತಿರುವ ನೂರಾರು ಮಂದಿಯನ್ನು ಪರೀಕ್ಷೆಗೆ ಒಪ್ಪಿಸುವಲ್ಲಿ ಆರೋಗ್ಯ-ಕಂದಾಯ-ಪೊಲೀಸ್ ಇಲಾಖೆಗಳು ಸುಸ್ತಾಗಿದ್ದಾರೆ.
ಕೋವಿಡ್ ತಪಾಸಣೆಗೆ ಒಪ್ಪದ ಗ್ರಾಮಸ್ಥರು, ಮನವೊಲಿಸುವಲ್ಲಿ ಹೈರಾಣಾದ ಅಧಿಕಾರಿಗಳು... ಕೋವಿಡ್-19 ಪರೀಕ್ಷೆ ಶಿಬಿರದಲ್ಲಿ ಇಡೀ ಗ್ರಾಮದ ಜನತೆಗೆ ಪರೀಕ್ಷೆ ನಡೆಸಲಾಗಿತ್ತು. ಒಟ್ಟು ಗ್ರಾಮದ ಜನಸಂಖ್ಯೆ 1600ಕ್ಕೂ ಹೆಚ್ಚಿದ್ದು, ಕೊರೊನಾ ಫಲಿತಾಂಶದಲ್ಲಿ 44 ಮಂದಿಗೆ ಪಾಸಿಟಿವ್ ಸೋಂಕು ದೃಢಪಟ್ಟಿತ್ತು. ಲಕ್ಷಣಗಳಿಲ್ಲದ ಕಾರಣ 16 ಮಂದಿಯನ್ನು ಹೋಂ ಐಸೋಲೇಷನ್ಗೆ ಒಳಪಡಿಸಿ ಉಳಿದ 28 ಮಂದಿಯನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು.
ಕೋವಿಡ್ ತಪಾಸಣೆಯಲ್ಲಿ ತಪ್ಪಿಸಿಕೊಂಡವರನ್ನು ಮತ್ತು ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಪರೀಕ್ಷೆಗೆ ಒಳಪಡಿಸಲು ಮನವಿ ಮಾಡಿದರೂ ಮನೆಯಿಂದ ಒಬ್ಬರೂ ಆಚೆಗೆ ಬರುತ್ತಿಲ್ಲ. ಇಂದು ನೆರಿಗಾ ಗ್ರಾಮ ಪಂಚಾಯಿತಿ, ಸರ್ಜಾಪುರ ಪೊಲೀಸ್, ಆರೋಗ್ಯ ಇಲಾಖೆ ಖುದ್ದು ಗ್ರಾಮದಲ್ಲಿ ಮನವಿ ಮಾಡಿದರೂ ಈವರೆಗೆ ಒಬ್ಬರು ಕೊವೀಡ್-19 ಪರೀಕ್ಷೆಗೆ ಸಹಕರಿಸುತ್ತಿಲ್ಲ.
ಹೀಗಾಗಿ 450 ಕ್ಕೂ ಹೆಚ್ಚು ಮಂದಿಗೆ ಕೊರೊನಾ ಶಂಕೆ ವ್ಯಕ್ತವಾಗುತ್ತಿದ್ದು, ತಾಲೂಕು ಆಡಳಿತಕ್ಕೆ ತಲೆನೋವಾಗಿ ಪರಿಣಮಿಸುತ್ತಿದೆ. ಇಂದು ಇಡೀ ಗ್ರಾಮಕ್ಕೆ ಸ್ಯಾನಿಟೈಸ್ ಮಾಡಿಸಿದ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳಿಗಾಗಿ ಗ್ರಾಮದಲ್ಲೇ ವಾಸ್ತವ್ಯ ಹೂಡಿದೆ. ಹೀಗಾಗಿ ನಾಳೆಯೂ ಗ್ರಾಮದಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಕೊರೊನಾ ಪರೀಕ್ಷೆಗೆ ಜನರ ಮನವೊಲಿಸುವ ಪ್ರಯತ್ನಕ್ಕೆ ತಾಲೂಕು ಆಡಳಿತ ಸಿದ್ದವಾಗಿದೆ.