ನೆಲಮಂಗಲ:ಮಹಾಮಾರಿ ಕೊರೊನಾ ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಹತ್ತು ಹಲವು ನಿಯಮಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದರೂ ಸಂಪೂರ್ಣವಾಗಿ ಕೊರೊನಾ ನಿಯಂತ್ರಿಸಲು ಆಗುತ್ತಿಲ್ಲ. ಇದರ ಮಧ್ಯೆ ಗ್ರಾಮೀಣ ಭಾಗದ ಜನರು ಕೋವಿಡ್ ಆರ್ಭಟಕ್ಕೆ ಬೆಚ್ಚಿ ಬಿದ್ದಿದ್ದು, ದೇವರ ಮೊರೆ ಹೋಗುತ್ತಿದ್ದಾರೆ. ಅದರಂತೆ ನೆಲಮಂಗಲದ ಮಲ್ಲಾಪುರ ಗ್ರಾಮಸ್ಥರು ತಮ್ಮ ಗುರುಹಿರಿಯರು ಮಾಡಿಕೊಂಡು ಬಂದ ಆಚರಣೆಗಳಂತೆ, ಸದ್ಯ ಕೊರೊನಾ ರೋಗವನ್ನು ನಿಯಂತ್ರಿಸಲು ದೇವರ ಮೊರೆ ಹೋಗಿದ್ದಾರೆ.
ಈ ಮೊದಲು ಕಾಲರಾ, ಪ್ಲೇಗ್ನಂತಹ ಕಾಯಿಲೆ, ದನಕರುಗಳಿಗೆ ಸಾಂಕ್ರಾಮಿಕ ರೋಗ ಮತ್ತಿತರ ಯಾವುದೇ ರೋಗರುಜಿನೆಗಳು ಊರ ಒಳಗೆ ಬಾರದಂತೆ ಗ್ರಾಮದೇವತೆ ನಾಡಮಾರಮ್ಮನ ಮೊರೆಹೋಗ್ತಿದ್ರು. ಹಾಗೆಯೇ ಇದೀಗ ಕೊರೊನಾ ಮಾಹಾಮಾರಿಯಿಂದ ಗ್ರಾಮದ ಜನರನ್ನು ರಕ್ಷಿಸುವಂತೆ ಗ್ರಾಮ ದೇವತೆಯ ಪೂಜೆ ಮಾಡಿದ್ದಾರೆ.
ಕಳೆದ ವರ್ಷ ಕೊರೊನಾ ಮಹಾಮಾರಿ ಆರ್ಭಟ ತಗ್ಗಿಸಲು ಘೋಷಣೆಯಾದ ಲಾಕ್‌ಡೌನ್ ನಿಂದ ಗ್ರಾಮದಲ್ಲಿ ಯಾವುದೇ ಆಚರಣೆ ಮಾಡಿಲ್ಲ. ಈ ಬಾರಿ ಲಾಕ್‌ಡೌನ್ ಸಡಿಲಿಕೆ ಮಾಡಿದ ಹಿನ್ನೆಲೆ ಗ್ರಾಮದ ಮನೆ ಮನೆಗಳಿಂದಲೂ ಅನ್ನ ತಂದು ದೇವಾಲಯದ ಕಲ್ಲಿನಕಂಬದ ಮುಂದೆ ರಾಶಿ ಹಾಕಿ ಪೂಜೆ ಪುನಸ್ಕಾರ ನೆರವೇರಿಸುತ್ತಿದ್ದಾರೆ.